ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪು ಕೋಟೆ ಕಾರು ಸ್ಫೋಟದಲ್ಲಿ ಭಾಗಿಯಾಗಿರುವ ಹುಂಡೈ ಐ20 ಕಾರನ್ನು ಸ್ಫೋಟಕ್ಕೂ ಮುನ್ನ ಮಸೀದಿಯೊಂದರ ಬಳಿ ಮೂರು ಗಂಟೆಗಳ ಕಾಲ ಪಾರ್ಕಿಂಗ್ ಮಾಡಲಾಗಿತ್ತು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ. ಇದರ ಬೆನ್ನಲ್ಲೇ ದೆಹಲಿ ಸ್ಫೋಟ ಪ್ರಕರಣದ ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಲಾಗಿರುವ ಡಾ. ಉಮರ್ ಮೊಹಮ್ಮದ್ ಎಂಬಾತನ ಮೊದಲ ಚಿತ್ರ ಇದೀಗ ಬಹಿರಂಗಗೊಂಡಿದೆ.
ಕಾರು ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳಕ್ಕೆ ಮಧ್ಯಾಹ್ನ 3:19 ಕ್ಕೆ ಪ್ರವೇಶಿಸಿ ಸಂಜೆ 6:48ಕ್ಕೆ ನಿರ್ಗಮಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪತ್ತೆಯಾಗಿದೆ. ಪಾರ್ಕಿಂಗ್ ಸ್ಥಳದಿಂದ ನಿರ್ಗಮಿಸಿದ ಕೆಲವೇ ನಿಮಿಷಗಳ ನಂತರ ಕೆಂಪು ಕೋಟೆಯ ಬಳಿ ಸಂಜೆ 6:52–7:00 ಗಂಟೆ ನಡುವೆ ಸ್ಫೋಟಗೊಂಡಿದೆ.
ಪಾರ್ಕಿಂಗ್ ಪ್ರದೇಶಕ್ಕೆ ಪ್ರವೇಶಿಸುವ ಮತ್ತು ನಿರ್ಗಮಿಸುವ ವೇಳೆ ಕಾರಿನಲ್ಲಿ ನೀಲಿ ಮತ್ತು ಕಪ್ಪು ಬಣ್ಣದ ಟೀ ಶರ್ಟ್, ಮುಖಕ್ಕೆ ಮಾಸ್ಕ್ ಧರಿಸಿದ್ದ ಚಾಲಕ ಒಬ್ಬನೇ ಕುಳಿತ್ತಿದ್ದ. ತನಿಖಾಧಿಕಾರಿಗಳು ಈಗ ದರ್ಯಗಂಜ್ ಕಡೆಗೆ ಹೋಗುವ ಮಾರ್ಗವನ್ನು ಪತ್ತೆಹಚ್ಚುತ್ತಿದ್ದಾರೆ. ಕಾರು ಎಲ್ಲಿಂದ ಆಗಮಿಸಿದೆ ಎನ್ನುವುದರ ಜಾಡು ಹಿಡಿಯಲು 100ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.
ಉಮರ್ ಇನ್ನೂ ಇಬ್ಬರು ಸಹಚರರೊಂದಿಗೆ ದಾಳಿಯನ್ನು ಯೋಜಿಸಿದ್ದಲ್ಲದೆ ಕಾರಿನಲ್ಲಿ ಡಿಟೋನೇಟರ್ ಅಳವಡಿಸಿದ್ದ ಎಂದು ಮೂಲಗಳು ತಿಳಿಸಿವೆ. ಇದೀಗ ಡಾ. ಉಮರ್ ಮೊಹಮ್ಮದ್ ನಿಜವಾಗಿಯೂ ಕಾರಿನಲ್ಲಿದ್ದನೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮೃತರ ಡಿಎನ್‌ಎ ಪರೀಕ್ಷೆಯನ್ನು ನಡೆಸಲು ಮುಂದಾಗಿದ್ದಾರೆ.

