ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಗೋವಾದ ಅರ್ಪೋರಾದಲ್ಲಿ ಪ್ರವಾಸಿಗರ ಹಾಟ್‌ಸ್ಪಾಟ್ ಎಂದು ಗುರುತಿಸಿಕೊಂಡಿದ್ದ ಫೇಮಸ್ ಬಿರ್ಚ್ ನೈಟ್‌ಕ್ಲಬ್‌ನಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೋಮಿಯೋ ಲೇನ್ ಪ್ರದೇಶದಲ್ಲಿರುವ ಈ ಕ್ಲಬ್‌ನಲ್ಲಿ ದುರಂತ ಸಂಭವಿಸಿದ್ದು, ಗಾಯಗೊಂಡ ಸುಮಾರು 50 ಮಂದಿಯನ್ನು ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರಿಂದ ಲಭ್ಯವಾದ ಮಾಹಿತಿಯಂತೆ, ರಾತ್ರಿ ಒಂದು ಗಂಟೆ ಸುಮಾರಿಗೆ ಕ್ಲಬ್‌ನ್ನು ಮುಚ್ಚುವ ಸಿದ್ಧತೆ ನಡೆಯುತ್ತಿದ್ದಾಗ ಬೆಂಕಿ ಆವರಿಸಿದೆ. ಅಡುಗೆಮನೆಯ ಬಳಿ ಇದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಫೋಟದ ತೀವ್ರತೆಗೆ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದು, ಅಲ್ಲಿದ್ದ ಹಲವರಿಗೆ ಹೊರಬರಲು ಅವಕಾಶ ಸಿಗದೆ ದುರಂತದಲ್ಲಿ ಅಸುನೀಗಿದ್ದಾರೆ. ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟದ ಸಾಧ್ಯತೆ ಇದ್ದರೂ, ನಿಖರ ಕಾರಣ ತನಿಖೆಯ ನಂತರವೇ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಮೃತಪಟ್ಟವರಲ್ಲಿ ಸುಮಾರು 19 ಮಂದಿ ಕ್ಲಬ್ ಸಿಬ್ಬಂದಿಯಾಗಿದ್ದು, 3 ರಿಂದ 4 ಮಂದಿ ಪ್ರವಾಸಿಗರು ಎನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಾಳುಗಳ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ಒದಗಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.

