ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಸೂರತ್ ನಗರದಲ್ಲಿರುವ ರಾಸಾಯನಿಕ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ನಿನ್ನೆ ಸಂಭವಿಸಿದ್ದು, ಒಂದು ದಿನದ ಬಳಿಕ ಕಾಣೆಯಾದ ಏಳು ಕಾರ್ಮಿಕರ ಶವಗಳು ಇಂದು ಮುಂಜಾನೆ ಕಾರ್ಖಾನೆ ಆವರಣದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಸಚಿನ್ ಕೈಗಾರಿಕಾ ಪ್ರದೇಶದಲ್ಲಿನ ಈಥರ್ ಇಂಡಸ್ಟ್ರೀಸ್ ಲಿಮಿಟೆಡ್‍ನ ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಮೃತಪಟ್ಟ ಏಳು ಜನರ ಪೈಕಿ ಒಬ್ಬರು ಕಂಪನಿಯ ಉದ್ಯೋಗಿ ಮತ್ತು ಇತರ ಆರು ಮಂದಿ ಗುತ್ತಿಗೆ ಕಾರ್ಮಿಕರು ಎಂದು ತಿಳಿದುಬಂದಿದೆ.
ಮೃತರನ್ನು ದಿವ್ಯೇಶ್ ಪಟೇಲ್ (ಕಂಪನಿ ಉದ್ಯೋಗಿ), ಸಂತೋಷ್ ವಿಶ್ವಕರ್ಮ, ಸನತ್ ಕುಮಾರ್ ಮಿಶ್ರಾ, ಧರ್ಮೇಂದ್ರ ಕುಮಾರ್, ಗಣೇಶ್ ಪ್ರಸಾದ್, ಸುನಿಲ್ ಕುಮಾರ್ ಮತ್ತು ಅಭಿಷೇಕ್ ಸಿಂಗ್ ಎಂದು ಗುರುತಿಸಲಾಗಿದೆ.
ನಿನ್ನೆ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 24 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಕಾರ್ಖಾನೆಯ ಆವರಣದಲ್ಲಿ ಶೋಧ ನಡೆಸುವ ವೇಳೆ ಏಳು ಕಾರ್ಮಿಕರ ಶವಗಳು ಇಂದು ಬೆಳಗ್ಗೆ ಪತ್ತೆಯಾಗಿವೆ.
ಸುಮಾರು 15 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, 9 ಗಂಟೆಗಳ ಕಾಲ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.