ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ರಾಜಧಾನಿ ದೆಹಲಿಯ ಸಮೀಪವಿರುವ ಗಾಜಿಯಾಬಾದ್‌ನಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡವೊಂದು ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಇಲ್ಲಿನ ಪಟೇಲ್ ನಗರದಲ್ಲಿರುವ ಎಸಿ ಸರ್ವಿಸ್ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 80 ವರ್ಷದ ವೃದ್ಧರೊಬ್ಬರು ದುರಂತ ಅಂತ್ಯ ಕಂಡಿದ್ದಾರೆ.
ಶುಕ್ರವಾರ ಮುಂಜಾನೆ ಸುಮಾರು 3:05ರ ಸಮಯದಲ್ಲಿ ಪಟೇಲ್ ನಗರದ ಮೂರು ಅಂತಸ್ತಿನ ಕಟ್ಟಡದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಈ ಕಟ್ಟಡದಲ್ಲಿ ಎಸಿ ಸರ್ವಿಸ್ ಸೆಂಟರ್ ಕಾರ್ಯನಿರ್ವಹಿಸುತ್ತಿತ್ತು. ಅಗ್ನಿಶಾಮಕ ದಳಕ್ಕೆ ಮಾಹಿತಿ ಸಿಗುವಷ್ಟರಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿತ್ತು. ಘಟನೆಯಲ್ಲಿ ತ್ರಿಲೋಕಿ (80) ಎಂಬುವವರು ಜೀವಂತ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಇದಕ್ಕೆ ಮುಖ್ಯ ಕಾರಣ ಕಟ್ಟಡದಲ್ಲಿದ್ದ ಗ್ಯಾಸ್ ಸಿಲಿಂಡರ್‌ಗಳು ಮತ್ತು ಎಸಿ ಕಂಪ್ರೆಸರ್‌ಗಳು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಈ ಸಿಲಿಂಡರ್‌ಗಳು ಸರಣಿಯಾಗಿ ಸ್ಫೋಟಗೊಳ್ಳುತ್ತಿದ್ದುದರಿಂದ ಕಾರ್ಯಾಚರಣೆ ತೀವ್ರ ಸವಾಲಾಗಿತ್ತು. ಅಂತಿಮವಾಗಿ ಹತ್ತಾರು ಅಗ್ನಿಶಾಮಕ ವಾಹನಗಳು ಮತ್ತು ನೀರಿನ ಮಾರ್ಗಗಳನ್ನು ಬಳಸಿ ಬೆಂಕಿಯನ್ನು ಹತೋಟಿಗೆ ತರಲಾಯಿತು.
ಈ ಭೀಕರ ಅವಘಡದಲ್ಲಿ ಕೇವಲ ಪ್ರಾಣಹಾನಿ ಮಾತ್ರವಲ್ಲದೆ, ಭಾರೀ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಸಂಭವಿಸಿದೆ.
10 ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. 10ಕ್ಕೂ ಹೆಚ್ಚು ಬೈಕ್‌ಗಳು ಅಗ್ನಿಗಾಹುತಿಯಾಗಿವೆ. ಕಟ್ಟಡದಲ್ಲಿದ್ದ ಎಸಿ ಯಂತ್ರಗಳು ಮತ್ತು ಬೆಲೆಬಾಳುವ ಪರಿಕರಗಳು ನಾಶವಾಗಿವೆ.
ಪ್ರಸ್ತುತ ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ನಿಖರ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ.



