ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಟು ಸಾವಿರ ಯಾತ್ರಾರ್ಥಿಗಳು ಸಿಲುಕಿದ್ದಾರೆ.
ಸಾಕಷ್ಟು ಯಾತ್ರಾರ್ಥಿಗಳು ಬದರಿನಾಥನ ದರುಶನಕ್ಕೆ ಆಗಮಿಸಿದ್ದು, ಮಾರ್ಗಮಧ್ಯೆ ಭೂಕುಸಿತವಾಗಿ ಎಲ್ಲ ವಾಹನಗಳು ನಿಂತಲ್ಲೇ ನಿಂತಿವೆ. ನಿನ್ನೆ ರಾತ್ರಿ ಚಿಂಕಾ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, 100 ಮೀಟರ್ನಷ್ಟು ಹೆದ್ದಾರಿ ಸಂಪೂರ್ಣ ಕೊಚ್ಚಿ ಹೋಗಿದೆ. ಈ ಕಾರಣದಿಂದಾಗಿ ಎರಡೂ ಬದಿಯಲ್ಲಿ ವಾಹನಗಳನ್ನು ಹಾಗೇ ನಿಲ್ಲಿಸಿಕೊಂಡಿದ್ದಾರೆ. ಸೇನಾ ಸಿಬ್ಬಂದಿ ಸಹಾಯಕ್ಕೆ ಧಾವಿಸಿದ್ದು, ಅವರು ಕೂಡ ಜಾಮ್ನಲ್ಲಿ ಸಿಲುಕಿಕೊಂಡಿದ್ದಾರೆ.
ಒಟ್ಟಾರೆ ಆರು ಕಿ.ಮೀ ಟ್ರಾಫಿಕ್ ಜಾಮ್ ಆಗಿದೆ. ತಡರಾತ್ರಿಯಾದರೂ ಹೆದ್ದಾರಿ ಸಂಚಾರ ಸರಿಪಡಿಸಲು ಆಗಿಲ್ಲ. ಇಂದು ಸಂಜೆ ಆರು ಗಂಟೆ ವೇಳೆಗೆ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ತಡರಾತ್ರಿಯಾದ ಕಾರಣ ನಿನ್ನೆ ಅವಶೇಷಗಳ ತೆರವು ಕಾರ್ಯ ಸಾಧ್ಯವಾಗಿರಲಿಲ್ಲ. ಇದೀಗ ಕಾರ್ಯ ಆರಂಭವಾಗಿದ್ದು, ಸಂಜೆ ವೇಳೆಗೆ ಪ್ರಯಾಣಿಕರು ತೆರಳಬಹುದಾಗಿದೆ.