Wednesday, January 14, 2026
Wednesday, January 14, 2026
spot_img

ಬಳ್ಳಾರಿಯಿಂದ ಬೆಂಗಳೂರಿಗೆ ‘ಬೃಹತ್ ಪಾದಯಾತ್ರೆ’: ಸರ್ಕಾರಕ್ಕೆ ಶ್ರೀರಾಮುಲು-ರೆಡ್ಡಿ ವಾರ್ನಿಂಗ್!

ಹೊಸದಿಗಂತ ಬಳ್ಳಾರಿ:

ನಗರದಲ್ಲಿ ನಡೆದ ಬ್ಯಾನರ್ ಗಲಾಟೆ, ಡ್ರಗ್ಸ್ ಮಾಫಿಯಾ ಹಾಗೂ ಜನಪ್ರತಿನಿಧಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಜನವರಿ 17ರಂದು ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಸಮಾವೇಶದ ಬೆನ್ನಲ್ಲೇ ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೀಂದ್ರ ಅವರ ಅಧಿಕೃತ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, “ಇದು ಕೇವಲ ಬ್ಯಾನರ್ ವಿವಾದಕ್ಕೆ ಸೀಮಿತವಾದ ಹೋರಾಟವಲ್ಲ. ಕಲ್ಯಾಣ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟಾಚಾರ ಮತ್ತು ದೌರ್ಜನ್ಯ ಮಿತಿಮೀರಿದೆ. ಕಲಬುರ್ಗಿಯಲ್ಲಿ ಚಲುವಾದಿ ನಾರಾಯಣಸ್ವಾಮಿ ಅವರ ಮೇಲೆ ನಡೆದ ಹಲ್ಲೆ ನೋಡಿದರೆ ಇದು ‘ರಿಪಬ್ಲಿಕ್ ಆಫ್ ಕಲಬುರ್ಗಿ’ ಆಗಿದೆಯೇ ಎಂಬ ಅನುಮಾನ ಮೂಡುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾನರ್ ಗಲಾಟೆ ಪ್ರಕರಣವನ್ನು ಸಿಐಡಿಗೆ ವಹಿಸಿರುವ ಸರ್ಕಾರದ ಕ್ರಮವನ್ನು ಶ್ರೀರಾಮುಲು ಟೀಕಿಸಿದರು. “ನಾವು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೆವು. ಘಟನೆ ನಡೆದು ಐದು ದಿನಗಳ ನಂತರ ಮಹಜರು ಮಾಡಿದರೆ ಸಾಕ್ಷ್ಯಗಳು ಸಿಗಲು ಸಾಧ್ಯವೇ? ಶಾಸಕರ ಮೇಲೆ ಗುಂಡು ಹಾರಿಸಿದರೂ ಶಾಸಕ ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿ ಅವರನ್ನು ಇನ್ನು ಯಾಕೆ ಬಂಧಿಸಿಲ್ಲ?” ಎಂದು ಪ್ರಶ್ನಿಸಿದರು.

ಜ. 17ರ ಸಮಾವೇಶದಲ್ಲಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಂಸದ ಸಣ್ಣ ಫಕೀರಪ್ಪ, ಮಾಜಿ ಶಾಸಕರಾದ ಸುರೇಶ್ ಬಾಬು, ಓಬಳೇಶ್ ಮತ್ತಿತರರು ಉಪಸ್ಥಿತರಿದ್ದರು.

Most Read

error: Content is protected !!