ಹೊಸದಿಗಂತ ವರದಿ, ಬೆಂಗಳೂರು:
ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಮಾದಕ ವಸ್ತು ಮಾರಾಟ ಹಾಗೂ ಸಾಗಾಟ ಆರೋಪದ ಮೇಲೆ ಒಬ್ಬ ಪ್ರತಿಷ್ಠಿತ ಆಸ್ಪತ್ರೆಯ ನೇತ್ರ ತಜ್ಞ ಹಾಗೂ ಮೂವರು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳು ಸೇರಿ ನಾಲ್ವರು ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಇವರಿಂದ 2.35 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿಮಾಡಿದ್ದಾರೆ.
ನೆದರ್ಲ್ಯಾಂಡ್ ದೇಶದಿಂದ ಭಾರತಕ್ಕೆ ಪೋಸ್ಟ್ ಮೂಲಕ ಹೈಡೋಗಾಂಜಾ ತರಿಸಿಕೊಳ್ಳುತ್ತಿದ್ದ ಮಾದಕ ವಸ್ತು ವ್ಯಸನಿ ನೇತ್ರ ತಜ್ಞ ನಿಖಿಲ್ ಗೋಪಾಲಕೃಷ್ಣನ್ (29) ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ 3 ಲಕ್ಷ ರೂ. ಮೌಲ್ಯದ 42 ಗ್ರಾಂ ಹೈಡೋ ಗಾಂಜಾ ಮತ್ತು ಒಂದು ದುಬಾರಿ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ತಮಿಳುನಾಡು ಮೂಲದ ಡಾ ನಿಖಿಲ್ ಗೋಪಾಲಕೃಷ್ಣನ್ ಯಶವಂತಪುರದ ಅಪಾರ್ಟ್ ಮೆಂಟ್ನಲ್ಲಿ ಒಬ್ಬನೇ ವಾಸವಾಗಿದ್ದ ಈ ಮಧ್ಯೆ ಮಾದಕ ಪದಾರ್ಥಗಳ ವ್ಯಸನಿಯಾಗಿರುವ ಆರೋಷಿ ನೆದರ್ಲ್ಯಾಂಡ್ನಿಂದ ಪೋಸ್ಟ್ ಮೂಲಕ ಭಾರತಕ್ಕೆ ಹೈಡೋ ಗಾಂಜಾ ತರಿಸಿಕೊಂಡು ಸೇವಿಸುತ್ತಿದ್ದ ಈ ಮಾಹಿತಿ ಮೇರೆಗೆ ಆತನ ಮನೆ ಮೇಲೆ ದಾಳಿ ನಡೆಸಿ ಮಾದಕವಸ್ತುಗಳ ಸಮೇತ ಬಂಧಿಸಲಾಗಿದೆ ಎಂದು ಹೇಳಿದರು.
ಮೂವರು ಅಂತಾರಾಷ್ಟ್ರೀಯ ಪ್ರಜೆಗಳ ಬಂಧನ: ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಅಂತಾರಾಷ್ಟ್ರೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಘಾನಾ ದೇಶದ ಇಮ್ಯಾನ್ಯೂಯಲ್ ಕೌಸಿ(32) ಮತ್ತು ಚೈನಾಸಾ ಕ್ರಿಪ್ಲಿನ್ ಓಕಯ್(38) ನೈಜಿರಿಯಾದ ಹಾಗೂ ಕಾಲು ಚೌಕಾ(40) ಬಂಧಿತರು. ಆರೋಪಿಗಳಿಂದ 2.5 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳ ಪೈಕಿ ಇಮ್ಯಾನ್ಯೂಯಲ್ ಕೌಸಿ ಮತ್ತು ಚೈನಾಸಾ ಕ್ರಿಪ್ಲಿನ್ ಓಕಯ್ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದಾರೆ. ಈ ಪೈಕಿ ಇಮ್ಯಾನ್ಯೂಯಲ್ ಕೌಸಿ ಮುಂಬೈನಲ್ಲಿ ಎನ್ಡಿಪಿಎಸ್ ಕೇಸ್ನಲ್ಲಿ ಜೈಲು ಸೇರಿ, ಬಿಡುಗಡೆಯಾಗಿದ್ದಾನೆ. ಮತ್ತೊಬ್ಬ ಆರೋಪಿ ವಿರುದ್ಧ ಅವಧಿ ಮೀರಿ ನೆಲೆಸಿದ ಆರೋಪದಡಿ ದಿಲ್ಲಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಇಬ್ಬರು ಬೆಂಗಳೂರಿಗೆ ಬಂದು, ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದರು. ಆರೋಪಿಗಳಿಂದ 51 ಲಕ್ಷ ರೂ. ಮೌಲ್ಯದ 500 ಗ್ರಾಂ ಎಂಡಿಎಂಎಲ್ ಕ್ರಿಸ್ಟಲ್, 2 ಮೊಬೈಲ್ ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.
ಮತ್ತೊಬ್ಬ ಆರೋಪಿ ನೈಜಿರಿಯಾದ ಕಾಲು ಚೌಕಾ ವ್ಯಾಪಾರ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಪರಿಚಯಸ್ಥ ಮತ್ತು ಇತರೆ ವಿದೇಶಿ ಪ್ರಜೆಗಳ ಮೂಲಕ ಪರಿಚಯಸ್ಥಗ್ರಾಹಕರಿಗೆ ಕಡಿಮೆ ಬೆಲೆಗೆ ಖರೀದಿಸಿರುವ ಮಾದಕ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಈತನಿಂದ 1,81 ಕೋಟಿ ರೂ. ಮೌಲ್ಯದ 236 ಎಂಡಿಎಂಎ ಕ್ರಿಸ್ಟಲ್, 1273 ಎಕ್ಸ್ಟೆಸಿ ಮಾತ್ರೆಗಳು ಮತ್ತು 1 ಮೊಬೈಲ್ ವಶಕ್ಕೆ ಪಡೆಯಲಾಗಿದೆ.