ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಐದು ಕಣಿವೆ ಜಿಲ್ಲೆಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ವಿರುದ್ಧ ಮಂಗಳವಾರ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ, ಭದ್ರತಾ ಪಡೆಗಳು 86 ಶಸ್ತ್ರಾಸ್ತ್ರಗಳು ಮತ್ತು 974 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಮಣಿಪುರ ಪೊಲೀಸ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(CAPFs), ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಜಂಟಿ ತಂಡಗಳು ಇಂಫಾಲ್ ಪೂರ್ವ, ಕಾಕ್ಚಿಂಗ್, ಇಂಫಾಲ್ ಪಶ್ಚಿಮ, ತೌಬಲ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದವು ಎಂದು ಐಜಿಪಿ(ವಲಯ-II) ಕೆ ಕಬೀಬ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಣಿಪುರ ಪೊಲೀಸ್, CAPFs, ಸೇನೆ ಮತ್ತು ಅಸ್ಸಾಂ ರೈಫಲ್ಸ್‌ಗಳನ್ನು ಒಳಗೊಂಡ ಜಂಟಿ ತಂಡ, ಏಕಕಾಲದಲ್ಲಿ ಅನೇಕ ಸ್ಥಳಗಳಲ್ಲಿ ಸಂಘಟಿತ ಕಾರ್ಯಾಚರಣೆ ನಡೆಸಿದವು ಎಂದು ಅವರು ಹೇಳಿದರು.
ಶಸ್ತ್ರಾಸ್ತ್ರಗಳಲ್ಲಿ ಐದು ಎಕೆ ರೈಫಲ್‌ಗಳು, ಮೂರು ಐಎನ್‌ಎಸ್‌ಎಎಸ್ ರೈಫಲ್‌ಗಳು, 16 ಎಸ್‌ಎಲ್‌ಆರ್‌ಗಳು, ಐದು .303 ರೈಫಲ್‌ಗಳು, 19 ಪಿಸ್ತೂಲ್‌ಗಳು, ಎರಡು ಕಾರ್ಬೈನ್‌ಗಳು, ಒಂಬತ್ತು ಇತರ ರೀತಿಯ ರೈಫಲ್‌ಗಳು ಮತ್ತು 16 ಸಿಂಗಲ್-ಬ್ಯಾರೆಲ್ ಗನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಾಂತಿಯನ್ನು ಪುನಃಸ್ಥಾಪಿಸಲು, ಸಾರ್ವಜನಿಕ ಸುವ್ಯವಸ್ಥೆಯನ್ನು ಎತ್ತಿಹಿಡಿಯಲು ಮತ್ತು ಜೀವ ಹಾಗೂ ಆಸ್ತಿಯನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ಈ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವಿಕೆಯು ಮಹತ್ವದ ಸಾಧನೆಯಾಗಿದೆ ಎಂದು ಕಬೀಬ್ ತಿಳಿಸಿದ್ದಾರೆ.