Friday, January 23, 2026
Friday, January 23, 2026
spot_img

ನಾರ್ಲ ಪಡೀಲಿನಲ್ಲಿ ‘ತ್ಯಾಜ್ಯ ಘಟಕ’ಕ್ಕೆ ಭಾರಿ ವಿರೋಧ: ತಲಪಾಡಿ ಗ್ರಾ.ಪಂ ವಿರುದ್ಧ ಸ್ಥಳೀಯರ ಪ್ರತಿಭಟನೆ

ಹೊಸದಿಗಂತ ಉಳ್ಳಾಲ:

ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರ್ಲ ಪಡೀಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಒಣ ತ್ಯಾಜ್ಯ ಸಂಸ್ಕರಣಾ ಘಟಕದ ವಿರುದ್ಧ ಸ್ಥಳೀಯ ನಿವಾಸಿಗಳು ಸಮರ ಸಾರಿದ್ದಾರೆ. ಶುಕ್ರವಾರ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ನಿವಾಸಿಗಳು, ಶಾಲೆಯ ಸಮೀಪವೇ ಘಟಕ ಸ್ಥಾಪಿಸುವ ಪಂಚಾಯತ್‌ನ ಜನವಿರೋಧಿ ನೀತಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ನಾರ್ಲ ಪಡೀಲ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಮೀಪವಿರುವ ಸುಮಾರು 50 ಸೆಂಟ್ಸ್ ಸರ್ಕಾರಿ ಜಾಗದಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಸರ್ವೇ ಕಾರ್ಯಕ್ಕಾಗಿ ಗುರುವಾರ ಜೆಸಿಬಿ ಯಂತ್ರದೊಂದಿಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಜೆಸಿಬಿಯನ್ನು ಹಿಮ್ಮೆಟ್ಟಿಸಿದ್ದರು. ಇದರ ಮುಂದುವರಿದ ಭಾಗವಾಗಿ ಶುಕ್ರವಾರ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಮಾತನಾಡಿ, “ಈ ಭಾಗದಲ್ಲಿ ಸುಮಾರು 400ಕ್ಕೂ ಹೆಚ್ಚು ಮನೆಗಳಿವೆ. ಶಾಲೆಯ ಜೊತೆಗೆ ಪಶು ಚಿಕಿತ್ಸಾಲಯವೂ ಇಲ್ಲೇ ಕಾರ್ಯನಿರ್ವಹಿಸುತ್ತಿದೆ. ಜನನಿಬಿಡ ಪ್ರದೇಶದಲ್ಲಿ ತ್ಯಾಜ್ಯ ಘಟಕ ನಿರ್ಮಿಸುವುದು ಅವೈಜ್ಞಾನಿಕ. ಇದರಿಂದ ಅಂತರ್ಜಲ ಕಲುಷಿತಗೊಂಡು, ದುರ್ನಾತ ಹರಡಿ ಮಕ್ಕಳ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಗ್ರಾಮ ಸಭೆಯಲ್ಲಿ ಚರ್ಚಿಸದೆ ಸಾಮಾನ್ಯ ಸಭೆಯಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದು ಕಾನೂನು ಬಾಹಿರ,” ಎಂದು ಕಿಡಿಕಾರಿದರು.

ಪ್ರತಿಭಟನಾ ಸ್ಥಳಕ್ಕೆ ಪಂಚಾಯತ್ ಕಾರ್ಯದರ್ಶಿಯ ಬದಲಾಗಿ ದ್ವಿತೀಯ ದರ್ಜೆ ಲೆಕ್ಕ ಪರಿಶೋಧಕ ಮಂಜಪ್ಪ ಅವರು ಭೇಟಿ ನೀಡಿ ಮನವಿ ಸ್ವೀಕರಿಸಿದ್ದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ, ಪಂಚಾಯತ್ ಪಿಡಿಒ ಸಂಧ್ಯಾ ಅವರು 50 ಸೆಂಟ್ಸ್ ಜಾಗದ ಸರ್ವೇ ಎಂದು ಹೇಳಿದ್ದರೆ, ಸ್ಥಳಕ್ಕೆ ಬಂದ ಮಂಜಪ್ಪ ಅವರು 60 ಸೆಂಟ್ಸ್ ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದರು. ಮೇಲಧಿಕಾರಿಗಳನ್ನು ಬದಿಗಿಟ್ಟು ಕೆಳಹಂತದ ಅಧಿಕಾರಿಗಳು ಈ ರೀತಿ ವರ್ತಿಸುವುದು ಶಿಷ್ಟಾಚಾರದ ಉಲ್ಲಂಘನೆ ಎಂದು ಗ್ರಾಮಸ್ಥರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಸುಧೀರ್ ಕುಮಾರ್ ತಲಪಾಡಿ, ರಿಕ್ಷಾ ಚಾಲಕ-ಮಾಲಕರ ಸಂಘದ ಪದಾಧಿಕಾರಿಗಳಾದ ನಿತಿನ್, ವಸಂತ್, ಅಮರ್ ಸೇರಿದಂತೆ ನೂರಾರು ನಿವಾಸಿಗಳು ಭಾಗವಹಿಸಿದ್ದರು. ಒಂದು ವೇಳೆ ಯೋಜನೆಯನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Must Read