ಹೊಸದಿಗಂತ ವರದಿ ಬಳ್ಳಾರಿ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ರೈತಪರ ಯೋಜನೆಗಳನ್ನು ಕೈ ಬಿಟ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ, ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ರೈತ ಮೋರ್ಚಾ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕರು, ಪಾಲಿಕೆ ಸದಸ್ಯರು ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗಳವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದರು.
ಈ ಸಂದರ್ಭದಲ್ಲಿ ಸಿರಗುಪ್ಪ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶಕ್ಕೆ ಅನ್ನ ನೀಡುವ ರೈತರಿಗಾಗಿ ಅನೇಕ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿತ್ತು, ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಮ್ಮ ಅವಧಿಯ ಯೋಜನೆಗಳನ್ನು ಕೈಬಿಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ, ಬಜೆಟ್ ನಲ್ಲಿ ಎಸ್ಸಿಪಿ, ಟಿಎಸ್ ಪಿಗೆ ಯೋಜನೆಗೆ 14 ಸಾವಿರ ಕೋಟಿ ರೂ.ಮೀಸಲಿಡಲಾಗಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳಿಗೆ ಬಳಕೆ ಮಾಡಲು ಮುಂದಾಗಿದೆ, ಇದು ಅತ್ಯಂತ ಖಂಡನೀಯ ಎಂದರು.
ರೈತರ ಮಕ್ಕಳಿಗಾಗಿ ಅನುಷ್ಟಾನಕ್ಕೆ ತಂದಿದ್ದ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರ ಕಡಿತಗೊಳಿಸಿದೆ. ತುಂಗಭದ್ರಾ ಜಲಾಶಯದಲ್ಲಿ 87 ಟಿಎಂಸಿ ನೀರು ಸಂಗ್ರಹವಿದ್ದರೂ ಕುಡಿಯಲು ಮಾತ್ರ ಕಾಲುವೆಗಳಿಗೆ ನೀರು ಹರಿಸಲಾಗಿದೆ. ನಮ್ಮ ರೈತರು ಭತ್ತ, ಮೆಣಸಿನಕಾಯಿ ಬೆಳೆಗಳನ್ನು ನಾಟಿ ಮಾಡಿ 1.5 ತಿಂಗಳು ಕಳೆದಿವೆ, ಕೂಡಲೇ ಕಾಲುವೆಗಳಿಗೆ ನೀರು ಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ರೈತ ವಿರೋಧಿ ಸರ್ಕಾರವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಜನಪರ ಕಾರ್ಯಕ್ರಮಗಳನ್ನು ಕೈಬಿಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ, ಇದು ಸರಿಯಲ್ಲ ಎಂದರು. ಅಧಿಕಾರಕ್ಕೆ ಬಂದ ಕೂಡಲೇ ವಿದ್ಯುತ್ ದರ ಮನಬಂದಂತೆ ಏರಿಕೆ ಮಾಡಿ ಜನಸಾಮಾನ್ಯರ ನೆಮ್ಮದಿ ಜೀವನಕ್ಕೆ ಸರ್ಕಾರ ಕೊಳ್ಳಿ ಇಟ್ಟಿದೆ.
ರೈತ ವಿದ್ಯಾನಿಧಿ, ಜಿಲ್ಲೆಗೊಂದು ಗೋ ಶಾಲೆ, ಭೂ ಸಿರಿ ಯೋಜನೆ, ಕೃಷಿಭೂಮಿ ಮಾರಾಟ ಕಾಯ್ದೆ ಸೇರಿದಂತೆ ಅನೇಕ ಯೋಜನೆಗಳನ್ನು ಸರ್ಕಾರ ಕೈ ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.