ಹೊಸ ದಿಗಂತ ವರದಿ, ಅಂಕೋಲಾ:
ತಾಲ್ಲೂಕಿನ ಗಡಿ ಭಾಗದಲ್ಲಿರುವ ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ಕೊಡ್ಲಗದ್ದೆಯ ವಿಶ್ವೇಶ್ವರ ಗಾಂವಕರ್ ಜೋಗಿಮನೆ ಎಂಬುವವರ ತೋಟವೊಂದರಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೃಹತ್ ಗಾತ್ರದ ನಾಲ್ಕೈದು ಬಂಡೆಗಳು ತನ್ನಷ್ಟಕ್ಕೆ ತಾನೇ ಕುಸಿದು ಬಿದ್ದ ಘಟನೆ ನಡೆದಿದೆ.
ಬಂಡೆ ಉರುಳುವಾಗ ಭಾರಿ ಪ್ರಮಾಣದ ಸದ್ದು ಉಂಟಾಗಿದ್ದು ಸುತ್ತಮುತ್ತಲಿನ ಭಾಗದ ನಿವಾಸಿಗಳಿಗೆ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಬಂಡೆ ಕುಸಿತದ ಪರಿಣಾಮ ತೋಟಕ್ಕೆ ನೀರು ಹಾಯಿಸುವ ನೀರಾವರಿ ಕಾಲುವೆ ಸಂಪೂರ್ಣ ಮುಚ್ಚಿಹೋಗಿದೆ. ಅಂದಾಜು 40 ಅಡಿ ಉದ್ದ 25 ಅಡಿ ಎತ್ತರದ ಒಂದು ಬಂಡೆ ಸೇರಿದಂತೆ ನಾಲ್ಕಾರು ಬಂಡೆಗಳು ಕುಸಿದಿವೆ. ಬಂಡೆಯ ತುಣುಕುಗಳು 50-60 ಅಡಿ ದೂರ ಹೋಗಿಬಿದ್ದಿವೆ. ಪದರು ಪದರಾಗಿರುವ ಈ ಬಂಡೆಯ ನಡುವೆ ಮಣ್ಣು ಇತ್ತು. ಬಂಡೆಗಳು ತೋಟದ ತುಂಬ ಬಿದ್ದಿದ್ದು ಬಂಡೆಯನ್ನು ತೋಟದಿಂದ ಹೊರಹಾಕುವುದು ಕಷ್ಟ.
ಸ್ಥಳಕ್ಕೆ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಶೀಲ್ದಾರ ಅನಂತ ಶಂಕರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಂಡೆಕಲ್ಲನ್ನು ತೋಟದಿಂದ ಹೊರಗೆ ಹಾಕುವಂತೆ ವಿಶ್ವೇಶ್ವರ ಗಾಂವಕರ್ ಅವರು ವಿನಂತಿಸಿದ್ದಾರೆ. ಸ್ಥಳದಲ್ಲಿ ಸುಂಕಸಾಳ ಪಿಡಿಓ ನಾಗೇಂದ್ರ ನಾಯ್ಕ, ಗ್ರಾ.ಪಂ ಸದಸ್ಯ ಚಂದು ನಾಯ್ಕ, ಗ್ರಾ.ಪಂ ಸಿಬ್ಬಂದಿ ಪ್ರದೀಪ ಶೆಟ್ಟಿ ಇದ್ದರು.