ಕಾರವಾರದಲ್ಲಿ ಬೃಹತ್ ತಿರಂಗಾ ಯಾತ್ರೆ: ನೋಡುಗರ ಗಮನ ಸೆಳೆದ ಅರ್ಧ ಕಿ.ಮಿ ಉದ್ಧದ ರಾಷ್ಟ್ರಧ್ವಜ

ಹೊಸದಿಗಂತ ಕಾರವಾರಃ

ರಾಷ್ಟ್ರ ರಕ್ಷಣೆಗಾಗಿ ಭಾರತೀಯರು ಸಂಘಟನೆಯಿಂದ ಕಾರವಾರ ನಗರದಲ್ಲಿ ಹಮ್ಮಿಕೊಂಡ ತಿರಂಗಾ ಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿತು. ರಾಷ್ಟ್ರಧ್ವಜ ಹಿಡಿದ ಸಾವಿರಾರು ಜನರು ತಿರಂಗಾಯಾತ್ರೆಯಲ್ಲಿ ಪಾಲ್ಗೊಂಡು ದೇಶಭಕ್ತಿ ಮೆರೆದರು. ನಿವೃತ್ತ ಹಾಗೂ ಹಾಲಿ ಯೋಧರನ್ನು ಸತ್ಕರಿಸುವ ಮೂಲಕ ಯೋಧರನ್ನು ಗೌರವಿಸಲಾಯಿತು.

ಮಾಲಾದೇವಿ ದೇವಾಲಯದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕರಾದ ರೂಪಾಲಿ ಎಸ್.ನಾಯ್ಕ ಹಾಗೂ ಗಣ್ಯರು ಪೂಜೆ ಸಲ್ಲಿಸುವ ಮೂಲಕ ಯಾತ್ರೆ ಆರಂಭವಾಯಿತು. ಯಾತ್ರೆಯುದ್ದಕ್ಕೂ ವಂದೇ ಮಾತರಂ ಗೀತೆ ಮೊಳಗಿತು.
 ಮಾಲಾದೇವಿ ಮೈದಾನದಿಂದ ನಗರದ ಅಂಬೇಡ್ಕರ್ ವೃತ್ತದ ತನಕ ರಾಷ್ಟ್ರಧ್ವಜ ಹಿಡಿದು  ಸಾಗಿದ ಮೆರವಣಿಗೆಯಲ್ಲಿ ಅರ್ಧ ಕಿ.ಮೀ.ಉದ್ದದ ರಾಷ್ಟ್ರಧ್ವಜ ಪ್ರಮುಖ ಆಕರ್ಷಣೆಯಾಗಿತ್ತು. ದೇಶಭಕ್ತಿಯ ಘೋಷಣೆ ಮೊಳಗಿಸುತ್ತ ತಿರಂಗ ಯಾತ್ರೆ ನಡೆಯಿತು. ಸೇನಾಪಡೆಗಳ ಮುಖ್ಯಸ್ಥರ ಭಾವಚಿತ್ರ ಹೊತ್ತ ವಾಹನಗಳು ಮೆರವಣಿಗೆಯಲ್ಲಿದ್ದವು.

ಅಂಬೇಡ್ಕರ್ ವೃತ್ತದ ಬಳಿ ನಿವೃತ್ತ ಹಾಗೂ ಹಾಲಿ ಸೇವೆ ಸಲ್ಲಿಸುತ್ತಿರುವ 40ಕ್ಕೂ ಹೆಚ್ಚು ಯೋಧರನ್ನು ಸತ್ಕರಿಸಿ ಗೌರವಿಸಲಾಯಿತು.
ವಾಗ್ಮಿ ಆದರ್ಶ ಗೋಖಲೆ,ರಾಮಕೃಷ್ಣಾಶ್ರಮದ ಶ್ರೀ ಭವೇಶಾನಂದ ಸ್ವಾಮೀಜಿ, ವಿವಿಧ ಧರ್ಮಗಳ ಧರ್ಮಗುರುಗಳು ಹಾಗೂ ವಿವಿಧ ಧರ್ಮದ ಮುಖಂಡರು,ನಿವೃತ್ತ ಯೋಧರ ಅಸೋಸಿಯೇಶನ್ ಅಸ್ನೋಟಿ ಇದರ ಅಧ್ಯಕ್ಷರಾದ ಬಾಲಕೃಷ್ಣ ಸಾಳುಂಕೆ ಹಾಗೂ ಸದಸ್ಯರು,ಕೋಸ್ಟಗಾರ್ಡ ನಿವೃತ್ತ ಐಜಿ ಮನೋಜ ಬಾಡಕರ್, ಸೆಂಟ್ ಮಿಲಾಗ್ರೇಸ್ ಸಂಸ್ಥಾಪಕರಾದ ಜಾರ್ಜ ಫರ್ನಾಂಡಿಸ್, ಅಬ್ಬಾಸ ಮುಲ್ಲಾ, ಸಂಜಯ ಶಾನಭಾಗ, ಬಿ.ಎಸ್.ಪೈ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ನಜೀರ ಅಹಮದ್, ಪ್ರಭಾಕರ ಮಾಳಸೇಕರ, ಅಶೋಕ ಕುಡ್ತಲಕರ, ನಗರಸಭೆ ಸದಸ್ಯರುಗಳು, ಪ್ರಮುಖರು, ಸಾರ್ವಜನಿಕರು ಉತ್ಸಾಹದಿಂದ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡರು.

 ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ದೇಶದಾದ್ಯಂತ ಭವ್ಯ ತಿರಂಗಾ ಯಾತ್ರೆ ನಡೆಯುತ್ತಿದೆ. ಕಾರವಾರದಲ್ಲಿ ವಿಜ್ರಂಭಣೆ, ಸಂತಸದಿಂದ ನಡೆದಿದೆ. ನಮ್ಮ ವೀರ ಸೇನಾನಿಗಳು ಅಪರೇಷನ್ ಸಿಂಧೂರದ ಯಶಸ್ಸಿಗೆ ಕಾರಣರಾಗಿದ್ದಾರೆ. ನರೇಂದ್ರ ಮೋದಿ ಅವರ ನಾಯಕತ್ವವೂ ಬಲಿಷ್ಠವಾಗಿದೆ. ನಾವು ಭಾರತೀಯರು ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇವೆ ಎಂದರು.

ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಮಾತನಾಡಿ, ಅಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ನಮ್ಮ ಹೆಮ್ಮೆಯ ರಕ್ಷಣಾ ಪಡೆಗಳ ಯೋಧರಿಗೆ ಮೊಟ್ಟ ಮೊದಲು ಸಲಾಂ ಹೇಳುತ್ತಿದ್ದೇನೆ. ಎಲ್ಲ ಧರ್ಮದ ಗುರುಗಳು, ವಿವಿಧ ಧರ್ಮದವರು, ಪಕ್ಷ, ಜಾತಿಯವರು ತಿರಂಗ ಯಾತ್ರೆಯಲ್ಲಿ ಸೇರಿರುವುದು ಸಂತಸ ತಂದಿದೆ.

ಉಗ್ರರು ನಮ್ಮ ಮಹಿಳೆಯರ ಸಿಂಧೂರ ಅಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಶಪಥ ಮಾಡಿ ಉಗ್ರರನ್ನು ನುಗ್ಗಿ ಹೊಡೆಯುತ್ತೇವೆ ಎಂದಿದ್ದರು. ನಮ್ಮ ಸೈನಿಕರು ಅಂತಹ ಸಾಹಸ ಪ್ರದರ್ಶಿಸಿ ಪಾಕ್ ನೆಲದಲ್ಲಿ ಉಗ್ರರನ್ನು ಸದೆಬಡಿದ್ದಾರೆ. ಅಂತಹ ಕೆಚ್ಚೆದೆಯ ಯೋಧರಿಗೆ ಗೌರವ ಸಲ್ಲಿಸಿ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಈ ತಿರಂಗಾ ಯಾತ್ರೆ ನಡೆಸುತ್ತಿದ್ದೇವೆ ಎಂದರು.

ಮಹಿಳೆಯರ ಸಿಂಧೂರ ಅಳಿಸಿದ ಉಗ್ರರಿಗೆ ರಕ್ಷಣಾ ಪಡೆಯ ಮಹಿಳಾ ಅಧಿಕಾರಿಗಳಾದ ಖುರೇಶಿ ಹಾಗೂ ವ್ಯೋಮಿಕಾ ಸಿಂಗ್ ತಕ್ಕ ಉತ್ತರ ಹೇಳಿದ್ದಾರೆ ಎಂದು ರಕ್ಷಣಾ ಪಡೆಯನ್ನು ರೂಪಾಲಿ ಎಸ್.ನಾಯ್ಕ ಶ್ಲಾಘಿಸಿದರು.

ಪ್ರಖರ ವಾಗ್ಮಿ ಆದರ್ಶ ಗೋಖಲೆ ಮಾತನಾಡಿ ನಮ್ಮ ಸೈನಿಕರ ಸಾಹಸವನ್ನು ಕೊಂಡಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!