ಭಾರತ-ನೇಪಾಳ ಗಡಿಯಲ್ಲಿ 10 ಕೋಟಿ ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶ: ಮಹಿಳೆಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಬನ್ಬಾಸಾ ಪ್ರದೇಶದ ಭಾರತ-ನೇಪಾಳ ಗಡಿಯಲ್ಲಿ ಪೊಲೀಸರು ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಗಡಿಯಲ್ಲಿ 10.23 ಕೋಟಿ ಮೌಲ್ಯದ 5.688 ಕೆ.ಜಿ ಎಂಡಿಎಂಎ ಮಾದಕ ವಸ್ತುಗಳನ್ನು ಪತ್ತೆಹಚ್ಚಿ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಪಾವತ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಗಣಪತಿಯವರು ನೀಡಿರುವ ಮಾಹಿತಿಯಂತೆ, ಬಂಧಿತ ಮಹಿಳೆ 22 ವರ್ಷದ ಇಶಾ ಎಂದು ಗುರುತಿಸಲಾಗಿದೆ. ಗಡಿಯಲ್ಲಿ ಇಶಾ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು ಓಡುತ್ತಿರುವುದನ್ನು ಗಮನಿಸಿದ್ದ ಗಸ್ತು ತಂಡವು ಆಕೆಯನ್ನು ತಡೆದು ತಪಾಸಣೆ ನಡೆಸಿತ್ತು. ಬ್ಯಾಗ್‌ನಲ್ಲಿ ಎರಡು ಪ್ಯಾಕೆಟ್‌ಗಳಲ್ಲಿ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ.

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಇಶಾ, ತನ್ನ ಪತಿ ರಾಹುಲ್ ಕುಮಾರ್ ಹಾಗೂ ಆತನ ಸಹಚರ ಕುನಾಲ್ ಕೊಹ್ಲಿ ಜೂನ್‌ನಲ್ಲಿ ಪಿಥೋರಗಢದಿಂದ ಮಾದಕ ವಸ್ತುಗಳನ್ನು ತಂದಿದ್ದರು ಎಂದು ಹೇಳಿದ್ದಾರೆ. ಆದರೆ, ಪೊಲೀಸರ ಕಾರ್ಯಾಚರಣೆಗಳಿಂದ ಹೆದರಿ, ವಸ್ತುಗಳನ್ನು ಎಸೆಯಲು ಕಾಲುವೆ ಕಡೆಗೆ ಹೋಗುತ್ತಿದ್ದೆ ಎಂದು ಆಕೆ ಹೇಳಿದ್ದಾಳೆ.

ಪ್ರಸ್ತುತ ಇಶಾ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಕುಮಾರ್ ಮತ್ತು ಕುನಾಲ್ ಕೊಹ್ಲಿಯ ಸುಳಿವಿಗಾಗಿ ಪೊಲೀಸರು ಬಲೆ ಬೀಸಿದ್ದು, ವಿಶೇಷ ತನಿಖಾ ತಂಡವು ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದೆ.

ಪೊಲೀಸರು ಈ ಪ್ರಕರಣವನ್ನು ಮಹತ್ವದಿಂದ ಪರಿಗಣಿಸಿದ್ದು, ಗಡಿಭಾಗಗಳಲ್ಲಿ ಮಾದಕ ವಸ್ತುಗಳ ಸಾಗಣೆ ತಡೆಯುವ ನಿಟ್ಟಿನಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದ ಗಡಿಭಾಗಗಳಲ್ಲಿ ತಪಾಸಣೆ ಹಾಗೂ ಗಸ್ತು ಕಾರ್ಯಚಟುವಟಿಕೆಗಳನ್ನು ಹೆಚ್ಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!