March 2, 2026
Monday, March 2, 2026
spot_img

ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇದ್ರೂ ಇಲ್ಲ ಎಂದ ವೈದ್ಯಾಧಿಕಾರಿ: ಅಸಮಾಧಾನದಿಂದ ಹೊರ ನಡೆದ ಶಾಸಕ ಸತೀಶ ಸೈಲ್

ಹೊಸದಿಗಂತ ವರದಿ ಕಾರವಾರ:

ಇಲ್ಲಿನ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಸಂದರ್ಭದಲ್ಲಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಕುರಿತಂತೆ ಪ್ರಸ್ತಾಪಿಸಿದ ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಅವರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳ ಉತ್ತರದಿಂದ ಅಸಮಾಧಾನಗೊಂಡು ಸಭೆಯಿಂದ ಹೊರ ನಡೆದ ಘಟನೆ ನಡೆಯಿತು.

ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದನ್ನು ಶಾಸಕ ಸತೀಶ ಸೈಲ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದು ಇದಕ್ಕೆ ಉತ್ತರಿಸಿದ ಜಿಲ್ಲಾ ವೈದ್ಯಾಧಿಕಾರಿ ಶಂಕರ್ ರಾವ್ ಅವರು ಜಿಲ್ಲೆಯ ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಿಲ್ಲ ಎಂದು ಸ್ಪಷ್ಟನೆ ನೀಡಿದರು, ಉಸ್ತುವಾರಿ ಸಚಿವರು ಸಹ ಜಿಲ್ಲೆಯ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇಲ್ಲ ಎಂದು ತಿಳಿಸಿದ್ದು ಇದರಿಂದ ಅಸಮಾಧಾನಗೊಂಡ ಶಾಸಕ ಸತೀಶ ಸೈಲ್ ಔಷಧಿ ಕೊರತೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಚಿವ ಮಂಕಾಳ ವೈದ್ಯ ಅವರು ತಾಲೂಕುಗಳ ವಿಷಯ ಜಿಲ್ಲಾ ಸಭೆಯಲ್ಲಿ ಬೇಡ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದರೆ ನೀವು ತರಿಸಿಕೊಳ್ಳಿ ಎಂದು ಹೇಳಿದ್ದು ಶಾಸಕ ಸೈಲ್ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಸಚಿವ ವೈದ್ಯ ಮತ್ತು ಶಾಸಕ ಸೈಲ್ ನಡುವೆ ಕೆಲ ಕಾಲ ಮಾತಿನ ಜಟಾಪಟಿ ನಡೆಯಿತು. ಸಿಟ್ಟಿಗೆದ್ದ ಸತೀಶ ಸೈಲ್ ವಾಸ್ತವ ಸ್ಥಿತಿಯ ಅರಿವು ಇರುವುದರಿಂದಲೇ ನಾನು ಮಾತನಾಡುತ್ತೇನೆ ಹೇಳಿದ್ದನ್ನೆಲ್ಲ ಸುಮ್ಮನೆ ಕೇಳಿಕೊಂಡು ಹೋಗಲು ನಾನೇನು ಅನಕ್ಷರಸ್ಥ ಅಂಗೂಟಾ ಚಾಫ್ (ಹೆಬ್ಬೆಟ್ಟು ಗುರುತಿನವ) ಅಲ್ಲ ಎಂದು ಸಭೆಯಿಂದ ಹೊರ ನಡೆದರು.

ಇದನ್ನೂ ಓದಿ:

ಸಭೆಯಿಂದ ಹೊರ ಬಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ, ಔಷಧಿ ಸಿಗುತ್ತಿಲ್ಲ ಅಧಿಕಾರಿಗಳಿಂದ ಯಾವ ಕೆಲಸವೂ ಆಗುತ್ತಿಲ್ಲ ಸಭೆಯಲ್ಲಿ ಅಧಿಕಾರಿಗಳು ಏನನ್ನೂ ಮಾತನಾಡದೇ ಮೌನನಾಗಿ ಕುಳಿತುಕೊಳ್ಳುವಂತಾಗಿದೆ ಎಂದರು.

ಸಮಸ್ಯೆಗಳು ಇದ್ದರೆ ಜನರು ನಮ್ಮನ್ನು ಕೇಳುತ್ತಾರೆ, ಕ್ಷೇತ್ರದ ಸಮಸ್ಯೆಗಳ ವಿಷಯದಲ್ಲಿ ಎಂದಿಗೂ ರಾಜಿ ಆಗುವುದಿಲ್ಲ ಎಂದ ಅವರು ಪ್ರಗತಿ ಪರಿಶೀಲನೆ ಸಭೆಯ ಪೂರ್ವ ತಾವು ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡಿಯೇ ಬರುತ್ತಿದ್ದು ತಪ್ಪು ಮಾಹಿತಿ ನೀಡಿದರೆನಡೆಯುವುದಿಲ್ಲ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !