ಮೇಕೆದಾಟು ಪಾದಯಾತ್ರೆ ಚುನಾವಣೆ ಸ್ಟಂಟ್: ಯತ್ನಾಳ್

ಹೊಸದಿಗಂತ ವರದಿ, ವಿಜಯಪುರ:

ಮೇಕೆದಾಟು ಪಾದಯಾತ್ರೆ ಚುನಾವಣೆಯ ಸ್ಟಂಟ್ ಅಷ್ಟೇ, ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಈ ಯೋಜನೆ ಏಕೆ ಕೈಗೆತ್ತಿಕೊಳ್ಳಲಿಲ್ಲ, ಚುನಾವಣೆ ಬಂದಾಗ ಕಾಂಗ್ರೆಸ್ಸಿಗರು ಈ ನಾಟಕವಾಡುತ್ತಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್ ವಿರುದ್ಧ ದೂರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್, ಶಿವಮೊಗ್ಗ ಹತ್ಯೆ ಮರೆಮಾಚಲು ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಕೇವಲ ಚುನಾವಣೆ ಸ್ಟಂಟ್, ಕಾಂಗ್ರೆಸ್‌ಗೆ ಉದ್ಯೋಗ ಇಲ್ಲ, ಈ ಹೋರಾಟಕ್ಕೆ ಪಾವಿತ್ರ್ಯತೆ ಇಲ್ಲ. ಈ ಹಿಂದಿನ ಸರ್ಕಾರಗಳಲ್ಲಿ ಡಿ.ಕೆ. ಶಿವಕುಮಾರ, ಎಂ.ಬಿ. ಪಾಟೀಲರೇ ಜಲಸಂಪನ್ಮೂಲ ಸಚಿವರಾಗಿದ್ದವರು, ಆಗ ಏಕೆ ಈ ಯೋಜನೆ ಅನುಷ್ಠಾನಗೊಳಿಸಲಿಲ್ಲ ಎಂದು ಪ್ರಶ್ನಿಸಿದರು.

ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಇನ್ನಷ್ಟೂ ಗಟ್ಟಿಯಾಗಬೇಕು ಎಂದರು.

ಆರೋಪಿಗಳನ್ನು ಬಂಧನ ಮಾಡಿದರೆ ಸಾಲದು, ಆರೋಪಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು.

ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ಪೊಲೀಸರು ಸಮರ್ಥರಿದ್ದಾರೆ, ಎಲ್ಲಿ ಏನು ಮಾಡಬೇಕು ಎನ್ನುವುದು ಗೊತ್ತಿದೆ, ಸಂದರ್ಭ ಹೇಗೆ ಬರುತ್ತದೆ ಗೊತ್ತಿಲ್ಲ ಎಂದರು.

ಹರ್ಷನ ತಾಯಿಗೆ ಬಿಜೆಪಿ ಟಿಕೆಟ್ ನೀಡುವ ಅಭಿಯಾನ ವಿಚಾರ ಕುರಿತು, ಯಾರೋ ಪಾಪ ಅಭಿಯಾನ ಮಾಡುತ್ತಾರೆ, ರಾಜಕಾರಣದಲ್ಲಿ ಪಕ್ಷ ನಿರ್ಣಯ ಮಾಡುತ್ತದೆ. ಅದಕ್ಕಾಗಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!