ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಪತ್ನಿ ಸೋನಂ ಸೇರಿದಂತೆ 8 ಆರೋಪಿಗಳ ಮೇಲೆ ಮೇಘಾಲಯ ಪೊಲೀಸರು ಚಾರ್ಚ್ಶೀಟ್ ಸಲ್ಲಿಸಿದ್ದಾರೆ.
ಸಾಕ್ಷಿಗಳು ಮತ್ತು ಪುರಾವೆಗಳ ಆಧಾರದ ಮೇಲೆ 790 ಪುಟಗಳ ಚಾರ್ಜ್ ಶೀಟ್ ಅನ್ನು ಮೇಘಾಲಯ ಪೊಲೀಸರು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದೆ ಎಂದು ಈಸ್ಟ್ ಕಾಶಿ ಹಿಲ್ಸ್ ಜಿಲ್ಲೆಯ ಎಸ್ಪಿ ವಿವೇಕ್ ಸೈಯಮ್ ತಿಳಿಸಿದ್ದಾರೆ.
ಸೋನಂ, ರಾಜ್ ಕುಶ್ವಾಹ ಮತ್ತು ಆತನ ಮೂವರು ಸ್ನೇಹಿತರಾದ ವಿಶಾಲ ಸಿಂಗ್ ಚೌಹಾಣ್, ಅಕಾಶ್ ಸಿಂಗ್ ರಜಪೂತ್, ಆನಂದ್ ಕುರ್ಮಿ ಮತ್ತು ಇತರೆ ಮೂವರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ರಘುವಂಶಿ ಕೊಲೆ ಮತ್ತು ಸಾಕ್ಷಿ ನಾಶ ಮಾಡಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸಂಬಂಧಿಸಿದ ಸೆಕ್ಷನ್ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.
ಸೋನಂ, ಕುಶ್ವಾಹ, ರಜಪೂತ್, ಚೌಹಾಣ್ ಮತ್ತು ಕುರ್ಮಿ ವಿರುದ್ಧ ಬಿಎನ್‌ಎಸ್‌ನ 103(1) (ಕೊಲೆ), 238 (ಎ) (ಸಾಕ್ಷ್ಯಗಳ ಕಣ್ಮರೆ) ಮತ್ತು 61(2) (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಮೇ 11 ರಂದು ಇಂದೋರ್ನಲ್ಲಿ ವಿವಾಹವಾಗಿದ್ದ ಸೋನಮ್ ಮತ್ತು ರಘುವಂಶಿ ದಂಪತಿ ಮೇ 21ರಂದು ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಮೇ 26ರಂದು ದಂಪತಿ ಕಾಣೆಯಾಗಿದ್ದಾರೆ ಎಂಬ ದೂರಿನ ಅನ್ವಯ ಸೊಹ್ರಾ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದರು. ತೀವ್ರ ತಪಾಸಣೆ ಬಳಿಕ ರಘುವಂಶಿ ಮೃತದೇಹ ಜೂನ್ 2ರಂದು ಆಳ ಕಂದಕದಲ್ಲಿ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಬಳಿಕ ಈ ಪ್ರಕರಣದಲ್ಲಿ ಸೋನಮ್ ಮತ್ತು ಆಕೆಯ ಪ್ರಿಯಕರನಾಗಿದ್ದ ರಾಜ್ ಕುಶ್ವಾಹ ಭಾಗಿಯಾಗಿರುವುದು ಪತ್ತೆಯಾಗಿತ್ತು.