ಹೊಸದಿಗಂತ ವರದಿ,ಮಂಡ್ಯ :
ಐತಿಹಾಸಿಕ ಶ್ರೀ ಚೆಲುವನಾರಾಯಣಸ್ವಾಮಿಯವರ ವೈರಮುಡೀ ಉತ್ಸವ ಸೋಮವಾರ ಮೇಲುಕೋಟೆಯ ರಾಜಬೀದಿಯಲ್ಲಿ ಸಹಸ್ರಾರು ಮಂದಿ ಭಕ್ತರ ಗೋವಿಂದನಾಮ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನಡೆಯಿತು.
ಸಾಕ್ಷಾತ್ ಶ್ರೀಮನ್ನಾರಾಯಣನ ಕಿರೀಟ ಎಂದೇ ನಂಬಿರುವ ವೈರಮುಡಿ ಕಿರೀಟವನ್ನು ಗರುಡಾರೂಢನಾದ ಚೆಲುವನಾರಾಯಣನ ಮುಡಿಗೆ ಅಲಂಕರಿಸಲಾಗಿತ್ತು. ಜಿಲ್ಲಾಧಿಕಾರಿ ಡಾ. ಕುಮಾರ ಅವರು ಸ್ವಾಮಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ರಾತ್ರಿ ಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆಯ ನಂತರ ಮಹಾಮಂಗಳಾರತಿಯ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾತ್ರಿ 8.08ಕ್ಕೆ ಆರಂಭವಾದ ವೈರಮುಡಿ ಉತ್ಸವ ಮುಂಜಾನೆ 3.30 ಗಂಟೆವರೆಗೂ ಸಾಂಗೋಂಪಾಂಗವಾಗಿ ನಡೆಯಿತು.
ದೇವಾಲಯದ ಎಡಭಾಗದಲ್ಲಿ ನಿರ್ಮಿಸಲಾಗಿರುವ ಮಂಟಪದಲ್ಲಿ ಸ್ವಾಮಿಗೆ ಮತ್ತೊಮ್ಮೆ ಮಂಗಳಾರತಿ ಮಾಡಲಾಯಿತು. ನಂತರ ಚತುರ್ವೀದಿಗಳಲ್ಲಿ ವೈರಮುಡಿ ಉತ್ಸವ ಸಂಭ್ರಮದಿಂದ ನೆರವೇರಿತು.