ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಸದಸ್ಯ ಜಗ್ದೀಪ್ ಸಿಂಗ್ ಅಲಿಯಾಸ್ ಜಗ್ಗಾನನ್ನ ಯುಎಸ್- ಕೆನಡಾ ಗಡಿ ಬಳಿ ರಾಜಸ್ಥಾನದ ಗ್ಯಾಂಗ್ ಸ್ಟರ್ ವಿರೋಧಿ ಕಾರ್ಯಪಡೆ ಮತ್ತು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ ಬಂಧಿಸಿದೆ.
ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ ರಾಜಸ್ಥಾನದ ಗ್ಯಾಂಗ್ ಸ್ಟರ್ ವಿರೋಧಿ ಕಾರ್ಯಪಡೆ ಮತ್ತು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಪ್ರಮುಖ ಸದಸ್ಯನಾಗಿರುವ ಜಗದೀಪ್ ಸಿಂಗ್ ನನ್ನು ಯುಎಸ್ ಮತ್ತು ಕೆನಡಾ ಗಡಿಯ ಬಳಿ ಬಂಧಿಸಿದೆ.
ಭಾರತದಿಂದ ಪರಾರಿಯಾಗಿದ್ದ ಜಗ್ಗಾ ವಿದೇಶದಿಂದ ಗ್ಯಾಂಗ್ ಅನ್ನು ನಿರ್ವಹಿಸುತ್ತಿದ್ದನು. ಈ ಗ್ಯಾಂಗ್ ನ ಮತ್ತೋರ್ವ ಸದಸ್ಯನಾಗಿರುವ ರೋಹಿತ್ ಗೋದಾರ ಅವರ ನೇತೃತ್ವದಲ್ಲಿ ಪ್ರಮುಖ ಕಾರ್ಯಕರ್ತ ಜಗ್ಗಾನನ್ನು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು ಬಂಧಿಸಿದರು.
ತನಿಖಾ ಸಂಸ್ಥೆಗಳ ಮಾಹಿತಿ ಪ್ರಕಾರ, ಜಗದೀಪ್ ಸಿಂಗ್ ಅಲಿಯಾಸ್ ಜಗ್ಗಾ ಮೂರು ವರ್ಷಗಳ ಹಿಂದೆ ಭಾರತದಿಂದ ದುಬೈಗೆ ಪರಾರಿಯಾಗಿದ್ದನು. ಅಲ್ಲಿಂದ ಬಳಿಕ ಆತ ಅಕ್ರಮವಾಗಿ ಅಮೆರಿಕಕ್ಕೆ ತೆರಳಿದ್ದನು. ಅಮೆರಿಕದಲ್ಲಿ ಆತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ರೋಹಿತ್ ಗೋದಾರನಿಗಾಗಿ ಕೆಲಸ ಮಾಡುತ್ತಿದ್ದು, ಗ್ಯಾಂಗ್ ನ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದನು.
ರಾಜಸ್ಥಾನ ಮತ್ತು ಪಂಜಾಬ್ ನಲ್ಲಿ ನಡೆದಿರುವ ವಿವಿಧ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಜಗ್ಗಾನಿಗಾಗಿ ಕಳೆದ ಮೂರು ವರ್ಷಗಳಿಂದ ಹುಡುಕಲಾಗುತ್ತಿತ್ತು.

                                    