ಹೊಸದಿಗಂತ ಡಿಜಿಟಲ್ ಡೆಸ್ಕ್;
ವಯನಾಡಿನ ಭೇಟಿಯನ್ನು ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್ ‘ವಯನಾಡಿನಲ್ಲಿ ಸ್ಮರಣೀಯ ದಿನದ ಕೆಲವು ನೆನಪುಗಳು’ (Some memories of a memorable day in Wayanad).ಎಂದು ಹೇಳಿದ್ದು, ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.
ಭೂಕುಸಿತವಾದ ವಯನಾಡು ಕ್ಷೇತ್ರದ ಸ್ಥಳಗಳಿಗೆ ಶಶಿ ತರೂರ್ ಭೇಟಿ ನೀಡಿದ್ದರು. ವಯನಾಡಿನಿಂದ ಹಿಂದಿರುಗಿದ ಬಳಿಕ ಇದೊಂದು ಸ್ಮರಣೀಯ ದಿನ ಎಂದು ಟ್ವೀಟ್ ಮಾಡಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಶಶಿ ತರೂರ್ ಸ್ಮರಣೀಯ ಅಂದ್ರೆ ಇದು ಮರೆಯಲಾರದಂತಹ ಘಟನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನನ್ನು ಟ್ರೋಲ್ ಮಾಡುತ್ತಿರುವ ಎಲ್ಲರಿಗೂ ಈ ಟ್ವೀಟ್ ಮಾಡುತ್ತಿದ್ದೇನೆ. ಸಾಮಾನ್ಯ ಭಾಷೆಯಲ್ಲಿ ಸ್ಮರಣೀಯ (Memorable) ಅಂದ್ರೆ ನೆನಪಿನಲ್ಲಿ ಉಳಿಯುವಂತಹದ್ದು. ಇದನ್ನು ಭವಿಷ್ಯದಲ್ಲಿ ನೆನಪಿನಲ್ಲಿ ಉಳಿಯುವಂತಹ ದಿನ ಅಂತಾನೂ ಅರ್ಥೈಸಲಾಗುತ್ತದೆ. ಹಾಗಾಗಿ ಈ ದುರಂತ ಜೀವನದಲ್ಲಿ ಸದಾ ನೆನಪಿನಲ್ಲಿರುತ್ತೆ ಎಂದು ಶಶಿ ತರೂರ್ ಹೇಳಿದ್ದಾರೆ.
https://x.com/ShashiTharoor/status/1819750266411024440
ಶಶಿ ತರೂರ್ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ಜನತೆ ಜೊತೆ ಮಾತುಕತೆ ನಡೆಸಿ, ಅವರ ಕಷ್ಟವನ್ನು ಆಲಿಸಿದ್ದಾರೆ. ಈ ವೇಳೆ ಮಾತನಾಡಿದ ಶಶಿ ತರೂರ್, ಸದ್ಯ ನಮ್ಮ ತಂಡದಿಂದ ಹಾಸಿಗೆ ಸೇರಿದಂತೆ ಕೆಲವು ಅಗತ್ಯ ಸಾಮಾಗ್ರಿಗಳನ್ನು ವಿತರಣೆ ಮಾಡುತ್ತಿದ್ದೇವೆ. ನಾವು ಭವಿಷ್ಯದಲ್ಲಿ ಸಂತ್ರಸ್ತರಿಗೆ ಕಲ್ಪಿಸಬಹುದಾದ ಸಹಾಯದ ಬಗ್ಗೆ ಪ್ಲಾನ್ ಮಾಡಿಕೊಳ್ಳಬೇಕು. ವಯನಾಡು ಭೇಟಿ ತುಂಬಾ ಭಾವನಾತ್ಮಕವಾಗಿದ್ದು, ಹೃದಯ ವಿದ್ರಾವಕವಾಗಿದೆ ಎಂದು ಹೇಳಿದ್ದಾರೆ.
ವಯನಾಡು ಭೂಕುಸಿತದಲ್ಲಿ ಮೃತರ ಸಂಖ್ಯೆ 365ಕ್ಕೆ ಏರಿಕೆಯಾಗಿದ್ದು, 206ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಇಂಡಿಯನ್ ಆರ್ಮಿ ಮತ್ತು ಎನ್‌ಡಿಆರ್‌ಎಫ್ ತಂಡದ ಸದಸ್ಯರು ಸತತವಾಗಿ ಆರನೇ ದಿನ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ವಯನಾಡು ಭಾಗದ ಬಹುತೇಕ ಎಲ್ಲಾ ಆಸ್ಪತ್ರೆಗಳು ಗಾಯಾಳುಗಳಿಂದ ಭರ್ತಿಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬದುಕಿದವರು ತಮ್ಮ ಕುಟುಂಬದವರ ಹುಡುಕಾಟದಲ್ಲಿದ್ದಾರೆ.