Men | ಪುರುಷರಲ್ಲಿ ಹೆಚ್ಚಾಗುತ್ತಿದೆ ‘ಬ್ರೋಕನ್ ಹಾರ್ಟ್ ಸಿಂಡ್ರೋಮ್’! ಎಚ್ಚರ

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕಂಡುಬರುತ್ತಿರುವ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಹೃದಯಾಘಾತ ಒಂದು. ಹಿಂದೆ ಹೃದಯ ಸಂಬಂಧಿ ಕಾಯಿಲೆಗಳು ಕೇವಲ ಹಿರಿಯರಲ್ಲಿ ಮಾತ್ರ ಕಾಣಿಸುವುದೆಂಬ ಕಲ್ಪನೆ ಇತ್ತು. ಆದರೆ ಈಗ ಯುವಕರು, ಮೇಲ್ನೋಟಕ್ಕೆ ಆರೋಗ್ಯವಾಗಿರುವವರು ಕೂಡ ಇದ್ದಕ್ಕಿದ್ದಂತೆ ಜೀವ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಈ ಹಿನ್ನೆಲೆ ಆರೋಗ್ಯ ತಜ್ಞರು ಹೊರಹಾಕಿರುವ ಮತ್ತೊಂದು ಮಾಹಿತಿ ಇನ್ನಷ್ಟು ಕಳವಳ ಮೂಡಿಸಿದೆ.

ಅಮೆರಿಕಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆದ ಒಂದು ವಿಶ್ಲೇಷಣಾ ಅಧ್ಯಯನದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಗಂಡಸರು ಭಾಗಿಯಾಗಿದ್ದರು. ಈ ಅಧ್ಯಯನದಲ್ಲಿ “ಬ್ರೋಕನ್ ಹಾರ್ಟ್ ಸಿಂಡ್ರೋಮ್” ಎಂಬ ಅಪರೂಪದ ಸ್ಥಿತಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಈ ಸಿಂಡ್ರೋಮ್‌ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ ಎಂದು ಹಿಂದಿನ ವರದಿಗಳು ಹೇಳಿದ್ದರೂ, ಇತ್ತೀಚಿನ ಮಾಹಿತಿಯ ಪ್ರಕಾರ ಪುರುಷರೇ ಹೆಚ್ಚು ಬಲಿಯಾಗುತ್ತಿರುವುದು ದೃಢಪಟ್ಟಿದೆ. ತೀವ್ರ ಒತ್ತಡ, ಮಾನಸಿಕ ಖಿನ್ನತೆ, ವೈಫಲ್ಯ, ಆರ್ಥಿಕ ನಷ್ಟ ಅಥವಾ ಕುಟುಂಬದ ಒತ್ತಡಗಳು ಈ ಸಿಂಡ್ರೋಮ್‌ಗೆ ಪ್ರಮುಖ ಕಾರಣವೆಂದು ತಜ್ಞರು ತಿಳಿಸಿದ್ದಾರೆ.

ಅಧ್ಯಯನದ ಅಂಕಿಅಂಶ ಪ್ರಕಾರ, ಮಹಿಳೆಯರಿಗಿಂತ ದ್ವಿಗುಣ ಪ್ರಮಾಣದಲ್ಲಿ ಪುರುಷರು ಈ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರಲ್ಲಿ ಈ ಸಿಂಡ್ರೋಮ್‌ನಿಂದ ಉಂಟಾಗುವ ಸಾವು 5.5% ಇದ್ದರೆ, ಪುರುಷರಲ್ಲಿ ಅದು 11.2% ರಷ್ಟಿದೆ. 61 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಇದರ ಅಪಾಯ ಸೀಮಿತವಾಗಿ ಕಂಡುಬಂದರೆ, 31 ರಿಂದ 45 ವರ್ಷದ ಮಧ್ಯ ವಯಸ್ಸಿನ ಪುರುಷರಲ್ಲಿ ಇದರ ಪ್ರಭಾವ ಹೆಚ್ಚಿದೆ. ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಗಂಭೀರ ಹೃದಯ ಸಂಬಂಧಿ ಕಾಯಿಲೆಗಳಿಗೂ ಈ ಸಿಂಡ್ರೋಮ್ ಕಾರಣವಾಗುತ್ತಿರುವುದು ಗಮನಾರ್ಹ.

ವಿಶೇಷವಾಗಿ 2016ರ ನಂತರ ಈ ಸಮಸ್ಯೆಯ ಪ್ರಮಾಣ ಹೆಚ್ಚುತ್ತಲೇ ಬಂದಿದ್ದು, ಕಳೆದ ಐದು ವರ್ಷಗಳಲ್ಲಿ ಪುರುಷರ ಮರಣ ಪ್ರಮಾಣದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂಬುದು ಆತಂಕಕಾರಿ ಸಂಗತಿ. ತಜ್ಞರ ಪ್ರಕಾರ, ಈ ರೋಗಕ್ಕೆ ಸೂಕ್ತ ಚಿಕಿತ್ಸೆ ವಿಧಾನಗಳು ಇನ್ನೂ ಸಮರ್ಪಕವಾಗಿ ಲಭ್ಯವಿಲ್ಲ. ಆದರೆ, ಜೀವನಶೈಲಿಯಲ್ಲಿ ಬದಲಾವಣೆ, ಒತ್ತಡ ನಿಯಂತ್ರಣ, ಮಾನಸಿಕ ಶಾಂತಿಗೆ ಆದ್ಯತೆ ನೀಡುವುದರಿಂದ ಜೀವವನ್ನು ಉಳಿಸಿಕೊಳ್ಳಲು ಸಾಧ್ಯ.

“ಬ್ರೋಕನ್ ಹಾರ್ಟ್ ಸಿಂಡ್ರೋಮ್” ಎಂಬ ಈ ಹೊಸ ಆತಂಕ ಪುರುಷರ ಜೀವಕ್ಕೆ ದೊಡ್ಡ ಸವಾಲಾಗಿದೆ. ಕೆಲಸ, ಕುಟುಂಬ, ಆರ್ಥಿಕ ಒತ್ತಡಗಳ ನಡುವೆಯೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ. ಸಮಯಕ್ಕೆ ತಕ್ಕಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು, ಒತ್ತಡವನ್ನು ನಿಯಂತ್ರಿಸುವುದು, ಹಾಗೂ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದೇ ಈ ಸಮಸ್ಯೆಗೆ ಏಕೈಕ ಪರಿಹಾರವೆಂದು ತಜ್ಞರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!