ಬಲಿಷ್ಠ ಮತ್ತು ಸ್ಥಿರ ಸ್ನಾಯು (ಮಸಲ್ಸ್)ಗಳ ನಿರ್ಮಾಣಕ್ಕೆ ಕೇವಲ ವ್ಯಾಯಾಮವಷ್ಟೇ ಸಾಕಾಗದು. ದೇಹಕ್ಕೆ ಪೂರಕವಾಗುವ ಪ್ರೋಟೀನ್, ವಿಟಮಿನ್ ಹಾಗೂ ಖನಿಜಗಳ ಸಮಪಾಲು ಅಗತ್ಯ. ನೀವು ಜಿಮ್‌ಗೆ ಹೋಗುತ್ತಿದ್ದರೂ, ಪ್ರೋಟೀನ್ ಶೇಕ್ ಕುಡಿದರೂ, ಆಹಾರದ ಗುಣಮಟ್ಟವೇ ನಿಮ್ಮ ದೇಹದ ನಿರ್ಮಾಣಕ್ಕೆ ಮುಖ್ಯವಾದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ, ನಿಮಗೆ ಸದೃಢ ಸ್ನಾಯುಗಳ ಬೆಳವಣಿಗೆಗೆ ನೆರವಾಗುವ ಕೆಲ ಪ್ರಮುಖ ಆಹಾರಗಳ ಮಾಹಿತಿ ಇಲ್ಲಿದೆ.
ಕಾಟೇಜ್ ಚೀಸ್
ಕಾಟೇಜ್ ಚೀಸ್‌ನಲ್ಲಿ ಇರುವ ಕ್ಯಾಸೀನ್ ಪ್ರೋಟೀನ್ ನಿಧಾನವಾಗಿ ಜೀರ್ಣವಾಗುತ್ತದರಿಂದ ರಾತ್ರಿ ವೇಳೆ ತಿನ್ನಲು ಇದು ಉತ್ಕೃಷ್ಟ. ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ B12 ನಿಂದ ಕೂಡಿದ್ದು, ಸ್ನಾಯು ಚೇತರಿಕೆ ಮತ್ತು ಬಲವರ್ಧನೆಗೆ ನೆರವಾಗುತ್ತದೆ.
ಮಸೂರದಾಲ್
ಫೈಬರ್, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾದ ಮಸೂರದಾಲ್ ನಿರಂತರ ಶಕ್ತಿ ನೀಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣವಿರುವುದರಿಂದ, ಸ್ನಾಯು ಸಂಕೋಚನೆ ಮತ್ತು ಆಮ್ಲಜನಕದ ಹರಿವಿಗೆ ಸಹಕಾರಿಯಾಗಿದೆ.
ಮೊಟ್ಟೆ
ಮೊಟ್ಟೆಯ ಹಳದಿಯಲ್ಲಿ ಇರುವ ವಿಟಮಿನ್‌ಗಳು ಮತ್ತು ಕೊಬ್ಬುಗಳು ಸ್ನಾಯುಗಳ ಚಲನೆ ಹಾಗೂ ಮೆದುಳಿನ ಚಟುವಟಿಕೆಗೆ ಸಹಾಯ ಮಾಡುತ್ತವೆ. ವ್ಯಾಯಾಮದ ಬಳಿಕ ಮೊಟ್ಟೆ ಸೇವನೆ ದೇಹಕ್ಕೆ ತಕ್ಷಣದ ಪೋಷಕಾಂಶ ನೀಡುತ್ತದೆ.
ಕ್ವಿನೋವಾ
ಒಂಬತ್ತು ಅಗತ್ಯ ಅಮೈನೋ ಆಮ್ಲಗಳ ಜೊತೆಗೆ ಈ ಧಾನ್ಯ ಕಬ್ಬಿಣ ಹಾಗೂ ಮೆಗ್ನೀಸಿಯಮ್‌ನಿಂದ ಕೂಡಿದೆ. ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವ ಮೂಲಕ ಸ್ನಾಯುಗಳನ್ನು ಬಲಿಷ್ಠಗೊಳಿಸಬಹುದು.
ಚೀನಿಕಾಯಿ ಬೀಜಗಳು
ಒಂದು ಹಿಡಿ ಬೀಜದಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಇದ್ದು, Testosterone ಉತ್ಪಾದನೆಗೂ ಸಹಾಯ ಮಾಡುತ್ತದೆ. ನಿಮ್ಮ ಓಟ್ಸ್ ಅಥವಾ ಮೊಸರಿನ ಜೊತೆ ತಿನ್ನಬಹುದು.
ಗ್ರೀಕ್ ಮೊಸರು
ಸಾಮಾನ್ಯ ಮೊಸರಿಗಿಂತ ಗ್ರೀಕ್ ಮೊಸರಿನಲ್ಲಿ 2 ಪಟ್ಟು ಹೆಚ್ಚು ಪ್ರೋಟೀನ್ ಇರುತ್ತದೆ. ಇದರಲ್ಲಿರುವ ಪ್ರೋಬಯಾಟಿಕ್ಸ್ ದೇಹದ ಜೀರ್ಣಕ್ರಿಯೆಗೂ ಸಹಕಾರಿಯಾಗುತ್ತವೆ.
ಸಾರ್ಡೀನ್ಗಳು
ಇವು ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ ಮತ್ತು ಪ್ರೋಟೀನಿಂದ ಕೂಡಿವೆ. ಮೂಳೆ ಬಲವರ್ಧನೆ ಮತ್ತು Testosterone ನಿಯಂತ್ರಣಕ್ಕಾಗಿ ಉತ್ತಮವಾದ ಆಯ್ಕೆಯಾಗಿದೆ.
ಈ ಎಲ್ಲಾ ಆಹಾರಗಳ ಸೇವನೆಯೊಂದಿಗೆ ನೀವು ತಕ್ಕ ವ್ಯಾಯಾಮವನ್ನು ಮಾಡಿಕೊಂಡರೆ, ನಿಮ್ಮ ದೇಹ ಸದೃಢ ಸ್ನಾಯುಗಳೊಂದಿಗೆ ಬಲಿಷ್ಠವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆರೋಗ್ಯಕರ ದೇಹಕ್ಕಾಗಿ ತಟ್ಟೆ ತುಂಬು ಪೌಷ್ಟಿಕತೆ ಬಹಳ ಅವಶ್ಯಕ!