ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮೆಟ್ರೋವನ್ನು ನಿಲ್ಲಿಸಲು ಇಬ್ಬರು ಯುವಕರು ಮಾಡಿದ ನಿರ್ಲಜ್ಜ ಕೃತ್ಯ ನೆಟ್ಟಿಗರನ್ನು ಕೆರಳಿಸಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ದೆಹಲಿ ಮೆಟ್ರೋ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದೆ.
ಮೆಟ್ರೋದಲ್ಲಿ ಕೆಲ ಪುಂಡ ಪೋಕರಿಗಳು ಮಾಡುವ ಕೆಲಸಗಳಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಮೆಟ್ರೋ ಬಾಗಿಲು ಮುಚ್ಚದೆ ನಿಲ್ಲಿಸಲು ಇಬ್ಬರು ತಮ್ಮ ಕಾಲಿನಿಂದ ಬಾಗಿಲು ತೆರೆಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರ ಅಮನ್ ಹೀಗೆ ಬರೆದಿದ್ದಾರೆ, ‘ಇಂತಹ ಜನರಿಂದಾಗಿ ಮೆಟ್ರೋ ತಡವಾಗುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಿರುವ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಮೆಟ್ರೋ ಪ್ರಾಧಿಕಾರ ಕೂಡ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದೆ. ಇದು `ಶಿಕ್ಷಾರ್ಹ ಅಪರಾಧ’ ಎಂದು ಮೆಟ್ರೊ ಅಧಿಕಾರಿಗಳೂ ಉತ್ತರಿಸಿದರು.
ಮೆಟ್ರೋ ಕೋಚ್‌ನ ಒಳಗಿನಿಂದ ತೆಗೆದ ವೀಡಿಯೊದಲ್ಲಿ ಇಬ್ಬರು ಪುಂಡರು ಬಾಗಿಲುಗಳ ಎರಡೂ ಬದಿಯಲ್ಲಿ ನಿಂತು ಅದನ್ನು ತಮ್ಮ ಕಾಲಿನಿಂದ ಮುಚ್ಚದಂತೆ ತಡೆಯಲು ಪ್ರಯತ್ನಿಸುತ್ತಿರುವುದು ಕಾಣುತ್ತದೆ. ಕೋಚ್‌ನ ಒಳಗಿನಿಂದ ಒಬ್ಬ ಪ್ರಯಾಣಿಕ ತರಾಟೆಗೆ ತೆಗೆದುಕೊಳ್ಳುವವರೆಗೂ ಹೀಗೆ ಮಾಡಿದ್ದಾರೆ. “ಪ್ರಯಾಣಿಕರು ಇಂತಹ ನಡವಳಿಕೆಯನ್ನು ಗಮನಿಸಿದರೆ 155370 ಗೆ DMRC ಸಹಾಯವಾಣಿಯನ್ನು ಸಂಪರ್ಕಿಸಬಹುದು” ಎಂದು ದೆಹಲಿ ಮೆಟ್ರೋ ರೈಲು ನಿಗಮ (DMRC) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ವೀಡಿಯೊಗೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದೆ.