ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಿಗರ ನೆಲದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಮತ್ತೊಮ್ಮೆ ತಮ್ಮ ಭಾಷಾ ದುರಹಂಕಾರವನ್ನು ಪ್ರದರ್ಶಿಸಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಾರ್ವಜನಿಕ ಸ್ಥಳಗಳು ಹಾಗೂ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವ ಆದೇಶವನ್ನು ವಿರೋಧಿಸಿ ಎಂಇಎಸ್ ಪುಂಡರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಸರ್ಕಾರಿ ಆದೇಶದ ಪ್ರತಿಯನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ.
ಘಟನೆಯ ಹಿನ್ನೆಲೆ:
ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಕ್ಯಾತೆ ತೆಗೆದ ಎಂಇಎಸ್ ಪುಂಡರು, “ಕರ್ನಾಟಕ ಸರ್ಕಾರದ ದಾದಾಗಿರಿ ಇಲ್ಲಿ ನಡೆಯುವುದಿಲ್ಲ” ಎಂದು ಕೂಗಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, “ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಎಲ್ಲವೂ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು” ಎಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ತೀವ್ರ ನಾಡದ್ರೋಹಿ ಘೋಷಣೆಗಳನ್ನು ಕೂಗಿದ್ದಾರೆ. ಗಡಿ ಭಾಗದಲ್ಲಿ ಮರಾಠಿ ಭಾಷೆಯಲ್ಲೇ ನಾಮಫಲಕಗಳನ್ನು ಹಾಕಬೇಕು ಹಾಗೂ ಪ್ರತಿಯೊಂದು ಸರ್ಕಾರಿ ದಾಖಲೆಗಳನ್ನು ಮರಾಠಿಯಲ್ಲೇ ನೀಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಪೊಲೀಸರ ಮುಂದೆಯೇ ಉದ್ಧಟತನ:
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಎಂಇಎಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಇದ್ದಾಗ್ಯೂ, ಸರ್ಕಾರದ ಕನ್ನಡ ಕಡ್ಡಾಯ ಆದೇಶದ ಪ್ರತಿಯನ್ನು ಸಾರ್ವಜನಿಕವಾಗಿ ಹರಿದು ಹಾಕಿ ತಮ್ಮ ಉದ್ಧಟತನ ಪ್ರದರ್ಶಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ-ನೂಕಾಟ ಕೂಡ ನಡೆದಿದ್ದು, ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತ್ತು.
ಇದನ್ನೂ ಓದಿ:
ಕನ್ನಡಿಗರ, ಕರವೇ ಕಾರ್ಯಕರ್ತರ ತೀವ್ರ ಆಕ್ರೋಶ:
ಡಿಸಿ ಕಚೇರಿಯಲ್ಲೇ ನಡೆದಿರುವ ಈ ನಾಡದ್ರೋಹಿ ಕೃತ್ಯ ಗಡಿಭಾಗದ ಕನ್ನಡಿಗರನ್ನು ಕೆರಳಿಸಿದೆ. ಎಂಇಎಸ್ ನಾಯಕರ ವರ್ತನೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿಯ ವೀರಭದ್ರೇಶ್ವರ ಕ್ರಾಸ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. “ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ” ಎಂದು ಕರವೇ ನಾಯಕರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಆದೇಶದ ಪ್ರತಿ ಹರಿದು ಹಾಕಿದ ದೇಶದ್ರೋಹಿಗಳನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಬೇಕು ಮತ್ತು ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಗೃಹ ಸಚಿವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸದ್ಯ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಕಾರ್ಯ ಮುಂದುವರಿದಿದೆ.



