ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಪ್ರಿಲ್ 22ರ ರಾತ್ರಿ ಆಕಾಶದಲ್ಲಿ ಅದ್ಭುತ ಖಗೋಳ ವಿಸ್ಮಯವೊಂದು ಗೋಚರಿಸಲಿದೆ. ಅನೇಕ ಶೂಟಿಂಗ್ ಸ್ಟಾರ್‌ಗಳು ಏಕಕಾಲದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿಕೊಳ್ಳಲಿವೆ.
ಒಂದು ಗಂಟೆಯವರೆಗೆ ಸುಮಾರು 10 ರಿಂದ 20 ಉಲ್ಕೆಗಳನ್ನು ಕಾಣಬಹುದಾಗಿದೆ. ಇದು ಮಂಗಳವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿ ಮತ್ತು ಏಪ್ರಿಲ್ 23ರ ಮುಂಜಾನೆಯವರೆಗೂ ಮುಂದುವರಿಯಬಹುದು.
ಈ ವಿಶೇಷ ದೃಶ್ಯವು ಜನರನ್ನು ರೋಮಾಂಚನಗೊಳಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ಸೌರವ್ಯೂಹದ ಗ್ರಹಗಳ ನಡುವಣ ನಿರ್ವಾತ ಪ್ರದೇಶದಲ್ಲಿ ಅಸಂಖ್ಯಾತ ಸಣ್ಣ ಸಣ್ಣ ಉಂಡೆಗಳಂತಹ ಕ್ಷುದ್ರಗ್ರಹಗಳಿವೆ. ಅಂತಹ ಯಾವುದೇ ಕಣವು ಭೂಮಿಯ ಗುರುತ್ವಾಕರ್ಷಣೆಯ ಅಡಿಯಲ್ಲಿ ಬಂದಾಗ ಮತ್ತು ಹೆಚ್ಚಿನ ವೇಗದಲ್ಲಿ ವಾತಾವರಣದ ಘರ್ಷಣೆಯಿಂದಾಗಿ ರಾತ್ರಿಯಲ್ಲಿ ಸ್ವಲ್ಪ ಸಮಯದವರೆಗೆ ಹೊಳೆಯುತ್ತಾ ಮಾಯವಾಗುತ್ತವೆ. ಈ ವಿದ್ಯಮಾನವನ್ನೇ ಉಲ್ಕೆ ಅಥವಾ ಶೂಟಿಂಗ್ ನಕ್ಷತ್ರ ಎಂದು ಕರೆಯಲಾಗುತ್ತದೆ.
ಈ ವಿದ್ಯಮಾನದ ಭಾಗವಾಗಿ ನೀವು ಒಂದು ಗಂಟೆಯಲ್ಲಿ ಕನಿಷ್ಠ 10 ರಿಂದ 20 ಉಲ್ಕೆಗಳನ್ನು ನೋಡಬಹುದು. ಇವುಗಳು ಸೆಕೆಂಡಿಗೆ 47 ಕಿಲೋಮೀಟರ್ ವೇಗದಲ್ಲಿ ಭೂಮಿಯ ಮೇಲ್ಮೈಯಿಂದ ಸುಮಾರು 100 ಕಿಲೋಮೀಟರ್ ಎತ್ತರದಲ್ಲಿ ಹೊಳೆಯುವುದನ್ನು ಕಾಣಬಹುದು. ಈ ಏಪ್ರಿಲ್‌ನ ಉಲ್ಕಾಪಾತಕ್ಕೆ ಪ್ರಮುಖ ಕಾರಣ ಕಾಮೆಟ್ ಥ್ಯಾಚರ್ ಎನ್ನಲಾಗಿದೆ.
ಉಲ್ಕಾಪಾತವನ್ನು ನೋಡಲು ಯಾವುದೇ ವಿಶೇಷ ಅಥವಾ ಹೆಚ್ಚುವರಿ ರೀತಿಯ ದೂರದರ್ಶಕ ಅಥವಾ ಇತರ ಉಪಕರಣಗಳ ಅಗತ್ಯವಿಲ್ಲ. ರಾತ್ರಿಯಲ್ಲಿ ನಿಮ್ಮ ಮನೆಯಿಂದಲೇ ನೀವು ಅದನ್ನು ನಿಮ್ಮ ಬರಿಗಣ್ಣಿನಿಂದ ನೇರವಾಗಿ ನೋಡಬಹುದು. ಇದಕ್ಕಾಗಿ ಹೆಚ್ಚು ಬೆಳಕಿನ ಮಾಲಿನ್ಯವಿಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.