ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಅಗಲೀಕರಣ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಯಿಂದಾಗಿ 141 ತೋಟಗಾರಿಕೆ ಉತ್ಪಾದಕರ ಸಹಕಾರಿ ಮಾರುಕಟ್ಟೆ ಮತ್ತು ಸಂಸ್ಕರಣಾ ಸಂಘ (ಹಾಪ್‌ಕಾಮ್ಸ್) ಮಳಿಗೆಗಳು ಮುಚ್ಚಲ್ಪಟ್ಟಿವೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾಹಿತಿ ನೀಡಿದರು.
ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತರ ವೇಳೆದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹಾಪ್‍ಕಾಮ್ಸ್ ಮಳಿಗೆಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ರಸ್ತೆ ಅಗಲೀಕರಣ, ಮೆಟ್ರೋ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಂದಾಗಿ ಮಳಿಗೆಗಳು ಬಂದ್ ಆಗಿವೆ. ಬೀದಿ ಬದಿ ವ್ಯಾಪಾರಿಗಳ ತೀವ್ರ ಪೈಪೋಟಿಗಳಿಂದ ಹಾಪ್ ಕಾಮ್ಸ್ ಗಳಲ್ಲಿ ವ್ಯಾಪಾರ ಕುಸಿತವಾಗಿದೆ. ಹೀಗಾಗಿ 557 ಮಳಿಗೆಗಳ ಪೈಕಿ 416 ಮಳಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಹಾಪ್‍ಕಾಮ್ಸ್ ಗಳಲ್ಲಿ ಮಂಜೂರಾದ 782 ಹುದ್ದೆಗಳ ಪೈಕಿ 438 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 384 ಹುದ್ದೆಗಳು ಖಾಲಿಯಿವೆ. ಇದರ ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
ಹಾಪ್ ಕಾಮ್ಸ್ ಸಂಸ್ಥೆಗೆ ವಾರ್ಷಿಕ ಶೇ.10.25ರ ಬಡ್ಡಿ ದರದಲ್ಲಿ 15 ಕೋಟಿ ರೂ. ಸಾಲ ನೀಡಲಾಗಿದೆ. ಹಾಪ್ ಕಾಮ್ಸ್ ಗಳಲ್ಲಿ ಮಾರಾಟ ಹೆಚ್ಚಿಸಲು ಹಣ್ಣು-ತರಕಾರಿ ಜೊತೆಗೆ ಇನ್ನಿತರ ಅಗತ್ಯ ವಸ್ತುಗಳ ಮಾರಾಟಕ್ಕೆ ಬೈಲಾದಲ್ಲಿ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.