ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ವಿವಿಧ ದೇಶಗಳಿಗೆ ಹಲವು ವಿಮಾನಗಳ ಹಾರಾಟ ಈಗಾಗಲೇ ಸ್ಥಗಿತಗೊಂಡಿದ್ದು, ಏರ್ ಇಂಡಿಯಾ ಕೂಡ ಮೇ 31 ರವರೆಗೆ ಇಸ್ರೇಲ್‌ಗೆ ತನ್ನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ.
ಏರ್ ಇಂಡಿಯಾವು ದೆಹಲಿ-ಟೆಲ್ ಅವೀವ್ ಮಾರ್ಗದಲ್ಲಿ ಮೇ 31 ರವರೆಗೆ ವಿಮಾನಯಾನವನ್ನು ಸ್ಥಗಿತಗೊಳಿಸಿದೆ ಎಂದು ಏರ್ ಇಂಡಿಯಾ ಕಾರ್ಯನಿರ್ವಾಹಕರೊಬ್ಬರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಅನೇಕ ವಿಮಾನಯಾನ ಸಂಸ್ಥೆಗಳು ಟೆಲ್ ಅವಿವ್ ಮಾರ್ಗದಲ್ಲಿ ಪ್ರಯಾಣವನ್ನು ನಿಲ್ಲಿಸಿದ್ದು, ಆದರೆ ಇಸ್ರೇಲಿ ವಿಮಾನಗಳು ತೀವ್ರ ನಿರ್ಬಂಧಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇನ್ನು ಇಸ್ರೇಲ್ ನಿಂದ ಭಾರತಕ್ಕೆ ಬರಲು ಬಯಸುವವರು ಜೋರ್ಡಾನ್ ಅಥವಾ ಈಜಿಪ್ಟ್ ಭೂ ಗಡಿ ದಾಟುವ ಮೂಲಕ ಪ್ರವೇಶಿಸಬೇಕು. ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತಕ್ಕೆ ತೆರಳಲು ನೆರವು ನೀಡುತ್ತಿದೆ. 24×7 ತುರ್ತು ಸಹಾಯವಾಣಿ ತೆರೆದಿದ್ದು, ಜೊತೆಗೆ ಬೃಹತ್ ನೋಂದಣಿ ಕಾರ್ಯವನ್ನು ಸಹ ಪ್ರಾರಂಭಿಸಿದೆ.
ರಾಯಭಾರ ಕಚೇರಿ ಕೂಡ ಇಸ್ರೇಲ್ ನಲ್ಲಿರುವ ಭಾರತೀಯರ ಸಮಸ್ಯೆ ಆಲಿಸಲು ವರ್ಚುವಲ್ ಚರ್ಚೆಯನ್ನು ನಡೆಸಿತು. ನಿರಂತರ ಬೆಂಬಲ ನೀಡುತ್ತಿದೆ ಎಂದು ತಿಳಿಸಿದೆ.



