ಹೊಸ ದಿಗಂತ ವರದಿ, ಪುತ್ತೂರು:
ಪುತ್ತೂರು ಅರಣ್ಯ ವಿಭಾಗ ವ್ಯಾಪ್ತಿಯ ಕಲೆಂಜಿಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ಹಾಲುಮಡ್ಡಿ ಶೇಖರಿಸಿ ಸಾಗಾಟ ಮಾಡುತ್ತಿದ್ದ ೪ ಮಂದಿಯನ್ನು ಪುತ್ತೂರು ಅರಣ್ಯ ಇಲಾಖೆ ಬಂಧಿಸಿದೆ.
ಈ ಸಂದರ್ಭ ಆರೋಪಿಗಳು ಹಾಲುಮಡ್ಡಿ ಸಾಗಾಟಕ್ಕೆ ಬಳಕೆ ಮಾಡಿದ್ದ ಅಟೋ ರಿಕ್ಷಾ ಸಹಿತ ರೂ.೧.೫೦ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ತಾಲೂಕಿನ ಕೆದಿಲ ಪಾಟ್ರಕೋಡಿ ಬಾಯಬೆ ಮನೆಯ ನಿವಾಸಿ ಉಮ್ಮರ್ ಫಾರೂಕ್ (೪೪), ಪಾಟ್ರಕೋಡಿ ಮನೆಯ ನಿವಾಸಿ ಮಹಮ್ಮದ್ ಹಸೈನಾರ್( ೩೦), ತಾಳಿಪಡ್ಪು ಮನೆ ನಿವಾಸಿ ಉಮ್ಮರ್ ಫಾರೂಕ್( ೨೬) ಮತ್ತು ಪಾಟ್ರಕೋಡಿ ಮನೆಯ ಆಲಿ ಹೈದರ್ ಎಂ.ಕೆ. ಬಂಧಿತ ಆರೋಪಿಗಳು.
ಈ ಆರೋಪಿಗಳು ರಕ್ಷಿತಾರಣ್ಯದಿಂದ ಧೂಪದ ಮರಗಳಿಂದ ಈ ಆಲುಮಡ್ಡಿ ಸಂಗ್ರಹಿಸಿ ಮಾರಾಟ ಮಾಡುವ ಧಂದೆ ನಡೆಸುತ್ತಿದ್ದು, ಇದೀಗ ಖಚಿತ ವರ್ತಮಾನದ ಹಿನ್ನಲೆಯಲ್ಲಿ ಅಟೋ ರಿಕ್ಷಾದಲ್ಲಿ ಸಾಗಾಟ ನಡೆಸುತ್ತಿದ್ದ ರೂ.೧೧ ಸಾವಿರ ಮೌಲ್ಯದ ಹಾಲುಮಡ್ಡಿಯನ್ನು ವಶಪಡಿಸಿಕೊಂಡಿದ್ದಾರೆ. ಪುತ್ತೂರು ಅರಣ್ಯ ಇಲಾಖೆ ೪ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ. ನೇತೃತ್ವದಲ್ಲಿ ಉಪ ವಲಯಾರಣ್ಯಾಧಿಕಾರಿ ವೀರಣ್ಣ, ಪ್ರಕಾಶ್, ಗೌರೀಶ್, ದಸ್ತು ಅರಣ್ಯ ಪಾಲಕರಾದ ಸತೀಶ್, ಚಾಲಕರಾದ ರಾಜೇಶ್, ತೇಜ ಪ್ರಸಾದ್ ಹಾಗೂ ಸಿಬಂದಿ ವಿನೋದ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.