ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಕ್ಷಾಂತರ ಜನರ ಪ್ರಾರ್ಥನೆಗೆ ಫಲ ಸಿಕ್ಕಿದೆ. ಇಂಡಿ ತಾಲೂಕಿನ ಲಚ್ಯಾನ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದಿದ್ದ ಪುಟ್ಟ ಮಗು ಸಾತ್ವಿಕ್ ಬದುಕುಳಿದಿದ್ದಾನೆ. ಒಂದಲ್ಲ, ಎರಡಲ್ಲ 20 ಗಂಟೆಗಳ ನಿರಂತರ ಕಾರ್ಯಾಚರಣೆ ನಂತರ ಮಗುವನ್ನು ಅಪಾಯದ ಅಂಚಿನಿಂದ ರಕ್ಷಿಸಲಾಗಿದೆ.
ಪುಟ್ಟ ಬಾಲಕ ಸಾತ್ವಿಕ್ ಸಾವನ್ನು ಗೆಲ್ಲಬೇಕೆಂದು ಲಕ್ಷಾಂತರ ಹೃದಯಗಳು ಬಯಸಿದ್ದವು. ಮಗುವಿಗೆ ಏನು ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದವರಿದ್ದಾರೆ. ಕೊನೆಗೂ ಪ್ರಾರ್ಥನೆಗೆ ಸಿಕ್ಕ ಫಲ ಎಂಬಂತೆ ಮೃತ್ಯುವನ್ನು ಜಯಿಸಿ ಸಾತ್ವಿಕ್ ಬದುಕುಳಿದಿದ್ದಾನೆ.
ತಲೆ ಕೆಳಗಾಗಿ ಮಗು ಬಿದ್ದಿದ್ದ ಹಿನ್ನೆಲೆ ಸಿಟಿ ಸ್ಕ್ಯಾನ್ ಮಾಡಲು ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದ್ದು, ಪವಾಡ ರೀತಿಯಲ್ಲಿ ಸಾತ್ವಿಕ್ ಬದುಕುಳಿದಿದ್ದಾನೆ. ಸಾತ್ವಿಕ್ ಆರೋಗ್ಯವಾಗಿದ್ದಾನೆ ಎಂದು ಇಂಡಿ ತಾಲೂಕು ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ ತಿಳಿಸಿದ್ದಾರೆ.