ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಕರ್ನಾಟಕಕ್ಕೆ ₹ 902.86 ಕೋಟಿ ಸಬ್ಸಿಡಿ ಬಿಡುಗಡೆ: ಕೇಂದ್ರ ಸಚಿವೆ ಕರಂದ್ಲಾಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರಾಗಿ ಹಾಗೂ ಜೋಳ ಖರೀದಿಯ ಬಾಕಿ ಮೊತ್ತ ₹ 902.86 ಕೋಟಿಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕರ್ನಾಟಕ ರಾಜ್ಯದಲ್ಲಿ 2021-22ನೇ ಆರ್ಥಿಕ ವರ್ಷದಲ್ಲಿ ಒಟ್ಟು 5.02 ಲಕ್ಷ ಮೆಟ್ರಿಕ್ ಟನ್ ರಾಗಿ (4.26 ಲಕ್ಷ ಮೆ. ಟನ್) ಮತ್ತು ಜೋಳ (75,302 ಮೆ. ಟನ್) ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಖರೀದಿಸಿ, ಪಡಿತರ ವಿತರಣಾ ಪದ್ಧತಿಯಡಿ ಫಲಾನುಭವಿಗಳಿಗೆ ವಿತರಿಸಲು ಅನುಮತಿ ನೀಡಿತ್ತು.

2021-22ರ ಆರ್ಥಿಕ ವರ್ಷದಲ್ಲಿ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಖರೀದಿ ಮಾಡಿ, ವಿತರಿಸಿದ ಧಾನ್ಯಗಳ ರಾಜ್ಯದ ಪಾಲಿನ ಬಾಕಿ ಇರುವ ಸಹಾಯಧನವನ್ನು ಬಿಡುಗಡೆಗೊಳಿಸುವಂತೆ ಕೋರಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಇಲಾಖೆಯ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಮಾ. 29ರಂದು ಪತ್ರವನ್ನು ಬರೆದಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಕೋರಿಕೆಯನ್ನು ಪರಿಗಣಿಸಿದ ಕೇಂದ್ರ ಸರಕಾರ, ಮಾ. 30ರಂದು ಕರ್ನಾಟಕ ರಾಜ್ಯದ ರಾಗಿ ಹಾಗೂ ಜೋಳ ಖರೀದಿಯ ಬೆಂಬಲ ಬೆಲೆಯ ಬಾಕಿ ಮೊತ್ತ ₹ 902.86 ಕೋಟಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಿ ಆದೇಶಿಸಿದೆ.

ಕರ್ನಾಟಕದ ರೈತರ ಹಿತಾಸಕ್ತಿಯನ್ನು ಪರಿಗಣಿಸಿ, ಕೇಂದ್ರ ಸರಕಾರದಿಂದ ಸಹಾಯಧನವನ್ನು ಅತೀ ಶೀಘ್ರದಲ್ಲಿ ಬಿಡುಗಡೆಗೊಳಿಸಿದಕ್ಕೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಇಲಾಖಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಚಿವೆ ಶೋಭಾ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!