ಹೊಸದಿಗಂತ ವರದಿ, ಕಲಬುರಗಿ:
ಆರೋಗ್ಯ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಏಮ್ಸ್ ಕಲಬುರಗಿಯಲ್ಲಿ ಸ್ಥಾಪನೆ ಮಾಡುವ ವಿಚಾರ ಕೈಬಿಟ್ಟು ಹೋಗಿಲ್ಲ. ಅಲ್ಲದೆ ಅದನ್ನು ಎಲ್ಲಿ ಅಸ್ತಿತ್ವಕ್ಕೆ ತರಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಕಲ್ಲಿದ್ದಲು ಗಣಿ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಅವರು ಗುರುವಾರ ಬಿಜೆಪಿ ವಿಭಾಗೀಯ ಸಂಘಟನಾ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಏಮ್ಸ್ ಶಾಖೆಗಳನ್ನು ಎಲ್ಲ ರಾಜ್ಯಗಳಲ್ಲಿ ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಆದರೆ, ರಾಜ್ಯದಲ್ಲಿ ಎಲ್ಲಿ ಅಸ್ತಿತ್ವಕ್ಕೆ ತರಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದರು.
ಏಮ್ಸ್ ಎಲ್ಲಿ ಸ್ಥಾಪನೆ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ನೇಮಕ ಮಾಡುವ ಉನ್ನತ ತಂಡದವೊಂದು ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿದ ನಂತರ ನಿರ್ಧಾರಗೊಳ್ಳಲಿದೆ. ನಾನು ಕೇಂದ್ರ ಸಚಿವನಾಗಿ ಧಾರವಾಡ ಜಿಲ್ಲೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಡಿ. ಸಮಿತಿ ವರದಿ ಹಾಗೂ ಸರ್ಕಾರದ ಶಿಫಾರಸ್ಸು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೀಗಾಗಿ ಕಲಬುರಗಿ ಹೆಸರು ಶಿಫಾರಸ್ಸು ಮಾಡಬಹುದು ಎಂದು ಹೇಳಿದರು.
ಕಲ್ಲಿದ್ದಲು ಕೊರತೆ ನೀಗಿಸಲು ಕ್ರಮ
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳಗೊಂಡಿದ್ದರಿಂದ ಸಹಜವಾಗಿಯೇ ಕಲ್ಲಿದ್ದಲು ಬೇಡಿಕೆ ಹೆಚ್ಚಿದೆ. ಸರಬರಾಜು ಮಾಡುವಲ್ಲಿ ತಡವಾಗುತ್ತಿದೆ ಹೊರತು ಕೊರತೆ ಇಲ್ಲ ಎಂದು ಕಲ್ಲಿದ್ದಲು ಖಾತೆಯನ್ನು ನೋಡಿಕೊಳ್ಳುತ್ತಿರುವ ಸಚಿವ ಜೋಶಿ ತಿಳಿಸಿದರು.