ಹೊಸದಿಗಂತ ವರದಿ ಬಳ್ಳಾರಿ:
ಕ್ರೀಡೆ ಮತ್ತು ವ್ಯಾಯಾಮ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮ್ಯಾರಾಥಾನಲ್ಲಿ ಇಂದು ಭಾಗವಹಿಸಿದ ಪ್ರತಿಯೊಬ್ಬರು ಇವತ್ತಿಗಷ್ಟೆ ಸಿಮೀತಗೊಳಿಸದೇ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.
ನಗರದಲ್ಲಿ ಸ್ಟೀಲ್ ಸಿಟಿ ಜೆ ಎಸ್ ಡಬ್ಲ್ಯೂ ಹಾಗೂ ಬಳ್ಳಾರಿ ಸೈಕ್ಲಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಮ್ಯಾರಾಥಾನ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾಪಟುಗಳಿಗೆ ಅಗತ್ಯ ಇರುವ ನೆರವು ನೀಡುವುದಾಗಿ ಭರವಸೆ ಕೊಟ್ಟರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ವಿಜೇತರಿಗೆ ಬಹುಮಾನ ವಿತರಿಸಿದರು. ಕ್ರೀಡಾ ಸಚಿವರಾಗಿ ಎಲ್ಲ ಅಗತ್ಯ ನೆರವು ನೀಡುವೆ, ಕ್ರೀಡಾಪಟುಗಳು ಯಾವುದೇ ಸೌಲಭ್ಯಕ್ಕೆ ಬೇಡಿಕೆ ಇಟ್ಟಲ್ಲಿ ಖಂಡಿತ ಸ್ಪಂದಿಸುವ ಕೆಲಸ ಮಾಡುವೆ ಎಂದರು.
ಪ್ರತಿ ವರ್ಷದಂತೆ ಈ ಬಾರಿಯೂ ಆಯೋಜಿಸಿದ ಮ್ಯಾರಾಥಾನ್ ನಲ್ಲಿ ಸಚಿವರು, ಶಾಸಕರು, ಎಸ್ಪಿ, ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಗಮನಸೆಳೆದರು.