ಹೊಸದಿಗಂತ ಡಿಜಿಟಲ್ ಡೆಸ್ಕ್:
KSRTC ಬಸ್ ಡ್ರೈವರ್ ಕಮ್ ಕಂಡಕ್ಟರ್ ಒಬ್ಬರು ಡಿಪೋದಲ್ಲೇ ವಿಷ ಸೇವಿಸಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ನಾಗಮಂಗಲದ KSRTC ಬಸ್ ಡಿಪೋನಲ್ಲಿ ಘಟನೆ ನಡೆದಿದ್ದು, ಎಚ್.ಆರ್.ಜಗದೀಶ್, ಆತ್ಮಹತ್ಯೆಗೆ ಯತ್ನಿಸಿದ ಬಸ್ ಚಾಲಕ ಮತ್ತು ನಿರ್ವಾಹಕನಾಗಿದ್ದಾನೆ.
ಸಚಿವ ಚಲುವರಾಯಸ್ವಾಮಿ ಸೂಚನೆ ಮೇರೆಗೆ ಅಧಿಕಾರಿಗಳು ವರ್ಗಾವಣೆ ಆದ ಮಾಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಇಂದು ವರ್ಗಾವಣೆ ಆದೇಶ ನೀಡಲು ಅಧಿಕಾರಿಗಳು ಮುಂದಾಗಿದ್ದು, ಈ ವೇಳೆ ವರ್ಗಾವಣೆ ಆದೇಶ ತೆಗೆದುಕೊಳ್ಳದೆ ಕ್ರಿಮಿನಾಶಕ ತಂದು ಡಿಪೋದಲ್ಲೇ ಸೇವನೆ ಮಾಡಿದ್ದಾರೆ .
ಸಹೋದ್ಯೋಗಿಗಳು ಎಷ್ಟೇ ಎಳದ್ರೂ ಆಸ್ಪತ್ರೆಗೆ ತೆರಳದೇ ಪಟ್ಟು ಹಿಡಿದಿದ್ದು, ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕೊನೆಗೆ ಮನವೊಲಿಸಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಜಗದೀಶ್ ತೀವ್ರ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಐಸಿಯುನಲ್ಲಿ ಜಗದೀಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಡೆತ್ ನೋಟ್ ಪತ್ತೆ
ಆತ್ಮಹತ್ಯೆಗೆ ಯತ್ನಿಸುವ ಮುನ್ನ ಕಂಡಕ್ಟರ್ ಜಗದೀಶ್ ಡೆತ್ ನೋಟ್ ಬರೆದಿರುವುದು ಬೆಳಕಿಗೆ ಬಂದಿದೆ. ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ನನ್ನ ವರ್ಗಾವಣೆಗೆ ಕಾರಣ ಏನೆಂದು ಡಿಪೋ ಮ್ಯಾನೇಜರ್ ಕೇಳಿದೆ. ನಿಯಂತ್ರಣಾಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂದರು. ಅವರನ್ನ ಕೇಳಿದಾಗ ಕೃಷಿ ಸಚಿವರ ಆದೇಶದ ಮೇರೆಗೆ ವರ್ಗಾವಣೆ ಎಂದ್ರು. ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪವೆಂದು ತಿಳಿಯದೆ ನೊಂದಿದ್ದೇನೆ. ಈ ಒತ್ತಡ, ಅವಮಾನವನ್ನ ಸಹಿಸಲು ನನ್ನಿಂದ ಆಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದು, ನನ್ನ ಆತ್ಮಹತ್ಯೆಗೆ ಶಾಸಕರೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾನೆ.