ಹೊಸದಿಗಂತ ಬೀದರ್
ರಾಜ್ಯದ 7 ಕೋಟಿಗೂ ಹೆಚ್ಚು ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಮಹತ್ವಾಕಾಂಕ್ಷಿ ಸಮೀಕ್ಷೆಗೆ ಇಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ಭಾಲ್ಕಿಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, “ಈ ಸಮೀಕ್ಷೆ ರಾಜ್ಯದ ಸಮಗ್ರ ಅಭಿವೃದ್ಧಿ, ಉತ್ತಮ ಯೋಜನೆ ರೂಪಣೆ ಹಾಗೂ ಜನಜೀವನ ಸುಧಾರಣೆಗೆ ಪ್ರಮುಖ ಆಧಾರವಾಗಲಿದೆ. ಆದ್ದರಿಂದ ಬೀದರ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಿಖರ ಹಾಗೂ ಸತ್ಯ ಮಾಹಿತಿಯನ್ನು ನೀಡಬೇಕು” ಎಂದು ಮನವಿ ಮಾಡಿದರು.
ಚುಳಕಿ ನಾಲಾ ಜಲಾಶಯ ಅಭಿವೃದ್ದಿಗೆ 175 ಕೋಟಿ
ಬೀದರ, ಸೆಪ್ಟೆಂಬರ್.೨೩- ಈ ಭಾಗದ ರೈತರ ಜಮೀನುಗಳಿಗೆ ನೀರುಣಿಸಲು ಚುಳಕಿ ನಾಲಾ ಜಲಾಶಯ ಅಭಿವೃದ್ದಿಗೆ 175 ಕೋಟಿ ರೂಪಾಯಿಗಳ ಡಿ.ಪಿ.ಆರ್. ವರದಿ ಸಿದ್ಧಪಡಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಸೋಮವಾರ ಹಲಸೂರು ತಾಲೂಕಿನ ಚುಳಕಿ ನಾಲಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು. ಈ ಜಲಾಶಯವು ಸ್ಥಳೀಯ ರೈತರ ಆಶಾಕಿರಣವಾಗಿದ್ದು, ಸಮರ್ಪಕವಾಗಿ ನೀರು ಸಂಗ್ರಹವಾದರೆ ಶೇ.70ಕ್ಕೂ ಹೆಚ್ಚು ಕೃಷಿಭೂಮಿಗೆ ನೀರಾವರಿ ಸಿಗುವ ಸಾಧ್ಯತೆ ಇದೆ. ಆದರೆ ಹುಳು ತುಂಬಿಕೆ ಹಾಗೂ ಕಾಲುವೆಗಳ ನವೀಕರಣದ ಅಭಾವದಿಂದಾಗಿ ಇದು ಬರಿ ಬಸವಕಲ್ಯಾಣ ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಮಾತ್ರ ಸೀಮಿತವಾಗಿದೆ. ಪುನರ್‍ಚೇತನ ಮಾಡಿದರೆ ರೈತರಿಗೆ ದೊಡ್ಡ ಸಹಾಯವಾಗಲಿದೆ ಎಂದು ಸಚಿವರು ತಿಳಿಸಿದರು.
ಜಲಾಶಯದ ಸುತ್ತಮುತ್ತಲಿನ ಹಾನಿಗೊಳಗಾದ ಬೆಳೆಗಳನ್ನು ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ನೀಡುವಂತೆ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲಾಶಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅಗತ್ಯವಿದ್ದು, ಸೈರನ್ ವ್ಯವಸ್ಥೆ ಹಾಗೂ ಗೆಟುಗಳ ಪುನರ್‍ಚೇತನ ಕೂಡ ತಕ್ಷಣ ಮಾಡಲಾಗುವುದು ಎಂದು ಅವರು ತಿಳಿಸಿದರು.
10 ಸಾವಿರ ಎಕರೆ ಜಮೀನುಗಳಿಗೆ ನೀರಾವರಿ ಸಾದ್ಯತೆ: ಚುಳಕಿ ನಾಲಾ ಜಲಾಶಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೆ ಸುತ್ತಮುತ್ತಲಿನ 10 ಸಾವಿರ ಎಕರೆ ಕೃಷಿ ಜಮೀನುಗಳಿಗೆ ನೀರಾವರಿ ಸಾದ್ಯವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ಸಹಾಯಕ ಆಯುಕ್ತರು ಮುಕುಲ್ ಜೈನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತೋಷ ಮಾಕಾ, ತಹಶೀಲ್ದಾರ್ ಶಿವಾನಂದ್ ಮೇತ್ರೆ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.