ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗುತ್ತಿದ್ದು, ಈ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಪಡೆ ಮುಖ್ಯಸ್ಥರು, ಮುಖ್ಯ ವನ್ಯಜೀವಿ ಪರಿಪಾಲಕರು ಸೇರಿದಂತೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎಂ.ಎಂ.ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಲು ಕ್ರಮ ವಹಿಸುವಂತೆ ಹಾಗೂ ಎಲ್ಲ ಬಾಧ್ಯಸ್ಥರ ಸಭೆ ಕರೆದು ಚರ್ಚಿಸಿ, ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ವನ್ಯಜೀವಿಗಳ ಅಸಹಜ ಸಾವನ್ನು ನಿಯಂತ್ರಿಸಲು ಮತ್ತು ವನ್ಯ ಮೃಗಗಳ ದಾಳಿಯಿಂದ ಅಮೂಲ್ಯ ಜೀವಹಾನಿ ಆಗುವುದನ್ನು ತಡೆಯಲು ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ, ಆಯಾ ವಲಯದಲ್ಲಿ ಅಧಿಕಾರಿ, ಸಿಬ್ಬಂದಿಗೆ ಹೊಣೆಗಾರಿಕೆ ನಿಗದಿಪಡಿಸುವಂತೆ ನಿರ್ದೇಶನ ನೀಡಿದ್ದಾರೆ.