ಹೊಸದಿಗಂತ ವರದಿ ಕಲಬುರಗಿ :
ಇತ್ತೀಚೆಗೆ ಅಕ್ರಮ ಮರುಳು ಸಾಗಾಣಿಕೆ ಮಾಡುತ್ತಿದ್ದ ಟ್ರಾಕ್ಟರ್ ಗೆ ಸಿಲುಕಿ ಸಾವನ್ನಪ್ಪಿದ್ದ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಮಯೂರ ಅವರ ಕುಟುಂಬ ವರ್ಗದವರನ್ನು ಚವಡಾಪುರ ತಾಂಡಾದ ಅವರ ನಿವಾಸದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಭೇಟಿಯಾಗಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರೂ 1 ಲಕ್ಷ ಪರಿಹಾರದ ಚೆಕ್ ವಿತರಿಸಿದ ಅವರು, ಸರ್ಕಾರದ ವತಿಯಿಂದ ರೂ 30 ಲಕ್ಷ ಪರಿಹಾರ ಹಾಗೂ ಮೃತ ಮಯೂರ ಅವರ ಸಂಬಳ ಹಾಗೂ ಇತರೆ ಸೌಲಭ್ಯ ಸೇರಿದಂತೆ ರೂ 40 ಲಕ್ಷ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಪೊಲೀಸ್ ಸಿಬ್ಬಂದಿ ಕುಟುಂಬ ವರ್ಗದವರಿಗೆ ಸರಕಾರಿ ನೌಕರಿ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರಕಾರದಲ್ಲಿ ನೇಮಕವಾದ ಅಧಿಕಾರಿಗಳು ಅಕ್ರಮ ಮರುಳು ಸಾಗಾಣಿಕೆ, ಜೂಜು ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ತನಿಖೆ ನಡೆಸಿ ಅಂತವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮ ಮರುಳು ಸಾಗಾಣಿಕೆ ಮಾಡುವವರು ರಾಜಕೀಯ ಪಕ್ಷಗಳ ಜೊತೆ ನಂಟು ಹೊಂದಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಪ್ರಕರಣದಲ್ಲಿ ಬಂಧಿಸಲಾದ ಆರೋಪಿ ಯಾವ ಪಕ್ಷದ ನಾಯಕರೊಂದಿಗೆ ಇದ್ದಾನೆಂದು ಆತನೇ ಉತ್ತರಿಸಲಿ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ ವೈ ಪಾಟೀಲ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.