ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಹಿಟ್ ಆಂಡ್ ರನ್ ಮಾಡಿ ಪರಾರಿಯಾಗಿದ್ದ ಕ್ಯಾಂಟರ್ ಟ್ರಕ್‌ಗಾಗಿ ಪೊಲೀಸರ ಹುಡುಕಾಟ ತೀವ್ರಗೊಂಡಿದೆ.
ಜನವರಿ 14 ರಂದು ನಡೆದ ಕಾರು ಅಪಘಾತದಲ್ಲಿ ಸಚಿವೆ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಗಾಯವಾಗಿತ್ತು. ಕಿತ್ತೂರು ಬಳಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದ ನಂತರ ಸಚಿವೆಯ ಬೆನ್ನು ಮೂಳೆಗೆ ಪೆಟ್ಟಾಗಿತ್ತು. 13 ದಿನಗಳ ಬಳಿಕ ಸಚಿವೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಇದುವರೆಗಿನ ತನಿಖೆಯಿಂದ ವಾಹನವು ಪಂಜಾಬ್ ಅಥವಾ ಹರಿಯಾಣದಿಂದ ಬಂದಿದ್ದು ಎಂದು ತಿಳಿದುಬಂದಿದೆ. ಹಿರೇಬಾಗೇವಾಡಿ ಟೋಲ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು 60 ಕ್ಯಾಂಟರ್‌ಗಳ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ಈಗಾಗಲೇ 30 ಕ್ಯಾಂಟರ್‌ಗಳನ್ನು ಪರಿಶೀಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆ ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಎಲ್ಲ ಕ್ಯಾಂಟರ್‌ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಭೀಮಾಶಂಕರ ಗುಳೇದ್ ಹೇಳಿದ್ದಾರೆ.
ಸಚಿವೆಯ ಕಾರು ಚಾಲಕ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಕೇಸ್ ದಾಖಲಿಸಿದ್ದು, ಕ್ಯಾಂಟರ್ ಟ್ರಕ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.