ಹೊಸದಿಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ.ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಅಡಿ ಈವರೆಗೆ 9,44,155 ಅರ್ಜಿದಾರರಿಗೆ ಹಣ ಹೋಗಿಲ್ಲ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಕ್ತ ಕಾರಣಗಳನ್ನು ನೀಡಿದ್ದಾರೆ.
3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. 1,59,356 ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಾಗಿದ್ದು, ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. 5,96,268 ಫಲಾನುಭವಿಗಳ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. 2,17,536 ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆಧಾರ್ ನೊಂದಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ವ್ಯತ್ಯಾಸವಾಗಿದೆ. ಬ್ಯಾಂಕ್ ಗಳ ಮೂಲಕ ಫಲಾನುಭವಿಗಳ ಇ-ಕೆವೈಸಿ ಮಾಡಿಸಲು ಇಲಾಖೆ ಕ್ರಮ ವಹಿಸಿದೆ. 9,766 ಇಂದೀಕರಿಸಿದ ದತ್ತಾಂಶದಿಂದಾಗಿ ಉಂಟಾದ ವಿಳಂಬವನ್ನು ಸೇವಾ ಸಿಂಧು ವತಿಯಿಂದ ಪುನರ್ ಪರಿಶೀಲಿಸಲಾಗುತ್ತಿದೆ.
ಸೆಪ್ಟಂಬರ್ ತಿಂಗಳಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2280 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಅಕ್ಟೋಬರ್ 4ರ ವರೆಗೆ 93 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ಯಶಸ್ವಿಯಾಗಿ ವರ್ಗಾಯಿಸಲಾಗಿದೆ. 5.5 ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ ಮೂಲಕ ಹಣ ಪಾವತಿಸಲು ಕ್ರಮ ಕೈಗೊಂಡಿರುವುದಾಗಿ ಸಚಿವರು ಹೇಳಿದ್ದಾರೆ.