ದಿಗಂತ ವರದಿ ಕಾರವಾರ:
ಇಲ್ಲಿನ ಕೋಡಿಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಳಿ ಸೇತುವೆ ಕುಸಿದು ಬಿದ್ದ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಸೇತುವೆ ಕುಸಿತದಿಂದ ಗಾಯಗೊಂಡು ಕ್ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ ಬಾಲ ಮುರುಗನ್ ಅವರಿಗೆ 50 ಸಾವಿರ ರೂಪಾಯಿಗಳ ವ್ಯಯಕ್ತಿಕ ಧನ ಸಹಾಯ ನೀಡಿ ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದರು.
ಸಾರ್ವಜನಿಕರಿಗೆ ಅನುಕೂಲ ಆಗುವಂತೆ ನೂತನ ಸೇತುವೆ ಮೇಲೆ ಶೀಘ್ರದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡುವ ಕುರಿತು ಭರವಸೆ ನೀಡಿದ ಅವರು ಜನರ ಸುರಕ್ಷತೆ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸುರಕ್ಷತಾ ಪ್ರಮಾಣ ಪತ್ರ ನೀಡಬೇಕಿದೆ ಎಂದರು.
ಲಘು ವಾಹನಗಳ ದ್ವಿಮುಖ ಸಂಚಾರಕ್ಕೆ ಅವಕಾಶ:
ಕೋಡಿಭಾಗ ಬಳಿ ಕಾಳಿ ನದಿಗೆ ನಿರ್ಮಾಣ ಮಾಡಲಾಗಿದ್ದ ಹಳೆಯ ಸೇತುವೆ ಕುಸಿದು ಬಿದ್ದ ಕಾರಣ ಹೊಸ ಸೇತುವೆ ಮೇಲೆ ಲಘು ವಾಹನಗಳ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆ ಮೂಲಕ ಪ್ರತಿದಿನ ಸಾವಿರಾರು ವಾಹನಗಳ ಸಂಚಾರವಿದ್ದು ಈ ಹಿಂದೆ ಗೋವಾ ಕಡೆ ಸಂಚರಿಸುವ ವಾಹನಗಳು ಹೊಸ ಸೇತುವೆ ಮೇಲಿಂದ ಹೋಗುವ ಮತ್ತು ಕಾರವಾರ ಕಡೆ ಬರುವ ವಾಹನಗಳು ಹಳೆಯ ಸೇತುವೆ ಮೂಲಕ ಬರುವ ಏಕ ಮುಖ ಸಂಚಾರ ವ್ಯವಸ್ಥೆ ಇತ್ತು.
ಇದೀಗ ಹಳೆಯ ಸೇತುವೆ ಕುಸಿದು ಬಿದ್ದ ಕಾರಣ ಕೆಲ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಸಂಖ್ಯೆಯಲ್ಲಿ ವಾಹನಗಳು ನಿಲ್ಲುವಂತಾಗಿತ್ತು. ಇದೀಗ ಜಿಲ್ಲಾಡಳಿತ ಹೊಸ ಸೇತುವೆ ಮೇಲೆ ಲಘು ವಾಹನಗಳು ಹೋಗಿ ಬರಲು ಅವಕಾಶ ಕಲ್ಪಿಸಿದ್ದು ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಸುರಕ್ಷತಾ ಪ್ರಮಾಣ ಪತ್ರ ನೀಡಿದ ನಂತರ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ದೊರಕಲಿದೆ.