ಇ.ಡಿ.ವಿರುದ್ಧ ಕಾಂಗ್ರೆಸ್ ಪ್ರತಿಭಟನೆಗೆ ಸಚಿವ ಮುರುಗೇಶ್ ನಿರಾಣಿ ಆಕ್ಷೇಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌,  ಬಾಗಲಕೋಟೆ
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿದೇರ್ಶನಾಲಯ (ಇಡಿ) ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಕಾಂಗ್ರಸ್ ಪ್ರತಿಭಟನೆ ಸರಿಯಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ
ಆಕ್ಷೇಪಿಸಿದ್ದಾರೆ.
ಬೀಳಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಯುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾರೇ ಇರಲಿ ಕಾನೂನಿಗೆ ತಲೆಬಾಗಲೇಬೇಕು ಎಂದು ಹೇಳಿದರು. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ತಿಳಿಯಲಿದೆ. ತನಿಖಾ ಹಂತದಲ್ಲಿ ಈ ರೀತಿ ಪ್ರತಿಭಟನೆ ಸರಿಯಲ್ಲ ಎಂದು ಹೇಳಿದರು.
ತನಿಖೆ ಹಂತದಲ್ಲಿರುವಾಗಲೇ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿರುವುದು ʼಕುಂಬಳಕಾಯಿ‌ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರುʼ ಅನ್ನುವ ಹಾಗೆ ಇದೆ ಎಂದು ವ್ಯಂಗ್ಯವಾಡಿದರು. ಐಟಿ, ಇಡಿ ಇಟ್ಟುಕೊಂಡು ಬಿಜೆಪಿ ಹೆದರಿಸುವ ಕೆಲಸ ಮಾಡುತ್ತದೆ ಎಂಬುದು ಸತ್ಯಕ್ಕೆ ದೂರವಾದ ಆರೋಪ. ಸಿದ್ದರಾಮಯ್ಯ ಮತ್ತು ಡಿಕೆಶಿ ಆರೋಪಗಳಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಬಿಜೆಪಿಗರನ್ನು ಸೀಳುನಾಯಿಗೆ ಹೊಲಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹಿರಿಯರು, ಹಿಂದೆ ಸಿಎಂ ಆಗಿದ್ದವರು. ಸಿದ್ದರಾಮಯ್ಯಗೆ ಸಲಹೆ ಕೊಡವಷ್ಟು ದೊಡ್ಡವರು ನಾವಲ್ಲ. ಯುವ ರಾಜಕಾರಣಿಗಳು ಹಿರಿಯರನ್ನು ಅನುಕರಣೆ ಮಾಡುತ್ತಾರೆ. ಅನುಭವಿ ರಾಜಕಾರಣಿಗಳ ನಡೆನುಡಿಗಳು ಯುವಕರಿಗೆ ಮಾರ್ಗದರ್ಶನ, ಹಾಗೂ ಉತ್ತಮ ಹಾದಿಯಲ್ಲಿ ಮುನ್ನಡೆಸುವಂತಿರಬೇಕು ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here