ಹೊಸದಿಂತ ವರದಿ,ಬೆಳಗಾವಿ:
ರಾಮ ಮಂದಿರ ಆಯಿತು, ರಾಮರಾಜ್ಯ ಯಾವಾಗ ಎಂದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ , ಚಿಲ್ಲರೆ ಗಳಿಗೆಯಲ್ಲಾ ಉತ್ತರ ಕೊಡುವುದಿಲ್ಲ ಎಂದು ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ರವಿವಾರ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯಂತಹವರ ಮಾತಿಗೆಲ್ಲ ನಾನು ಉತ್ತರ ಕೊಡೊಲ್ಲ ಎಂದರು.
ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಸಂತೋಷದ ವಿಚಾರ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೂ ಸಾರ್ಥಕ ಆಯ್ತು, ಭಾರತೀಯ ಸಂಸ್ಕೃತಿ ಉಳಿಸಬೇಕು ಎಂದು ಸಾವಿರಾರು ಜನ ಬಲಿದಾನ ಮಾಡಿದ್ಧಾರೆ.
ಬಿಜೆಪಿಯವರು ರಾಮ ಮಂದಿರ ಕಟ್ಟುವುದಿಲ್ಲ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದರು. ಆದರೆ ಈಗ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ ಎಂದರು.
ಪ್ರಪಂಚದಲ್ಲಿ ಭಾರತದ ಸಂಸ್ಕೃತಿ ಬೆಳೆಯಬೇಕು. ಇದು ರಾಮ ಮಂದಿರ ಅಲ್ಲ ರಾಷ್ಟ್ರ ಮಂದಿರ ಎಂದು ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಈ ಹಿಂದೆ ಅಹಿಂದ ಅಂತ ಹೋಗುತ್ತಿದ್ದರು. ಈಗ ಹಿಂದುಳಿದವರು, ದಲಿತರು, ಕ್ರೈಸ್ತರನ್ನ ಬಿಟ್ಟಿದ್ದಾರೆ. ಇನ್ನು ಅಲ್ಪಸಂಖ್ಯಾತರು ಮಾತ್ರ ಉಳಿದಿದ್ದಾರೆ. ಅವರ ಮೇಲೆ ರಾಜಕೀಯ ಮಾಡಬೇಕು ಎನ್ನುವುದು ಸಿದ್ದರಾಮಯ್ಯ ಲೆಕ್ಕ ಎಂದು ಟೀಕಿಸಿದರು.
ರಾಮಮಂದಿರ ಆಗಬಾರದು ಎಂದು ಕೋರ್ಟಿಗೆ ಹೋದವರು ಕೂಡಾ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪುಷ್ಪ ವೃಷ್ಟಿ ಮಾಡಿದ್ದಾರೆ. ರಾಮಮಂದಿರ ಕಟ್ಟಿದ್ದು ಒಳ್ಳೆಯದು ಎಂದು ಹೇಳಿದ್ದಾರೆ. ಆದರೆ, ಹಿಂದೂ- ಮುಸ್ಲಿಂ ಒಟ್ಟಾಗಬಾರದು ಎನ್ನುವುದು ಕಾಂಗ್ರೇಸ್ ಮತ್ತು ಸಿದ್ದರಾಮಯ್ಯ ಅವರ ಉದ್ದೇಶ ಎಂದರು.
ಮೋದಿ ಅವರು ಜಾರಿಗೆ ತಂದ ತ್ರಿವಳಿ ತಲಾಕ್ ರದ್ದತಿಯನ್ನು ಮುಸ್ಲಿಮರೇ ಒಪ್ಪಿದ್ದಾರೆ. ಆದರೆ ಕಾಂಗ್ರೆಸ್ನವರು ಒಪ್ತಿಲ್ಲ ಈಶ್ವರಪ್ಪ ವ್ಯಂಗ್ಯವಾಡಿದರು.
ನನ್ನ ಪುತ್ರ ಕಾಂತೇಶ್ ಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದೇನೆ. ಟಿಕೇಟ್ ಕೊಟ್ಟರೆ ಹಾವೇರಿಯಿಂದ ಸ್ಪರ್ಧೆ ಮಾಡುತ್ತಾನೆ ಎಂದರು
ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಹೆದರುತ್ತಿಲ್ಲ. ಬಿಜೆಪಿ ಯಾರಿಗಾದರೂ ಹೆದರಿದ್ದರೆ ಪಂಚಾಯಿತಿಯಿಂದ ಹಿಡಿದು ಪ್ರಧಾನಿ ಹುದ್ದೆಯವರೆಗೆ ಗೆಲ್ಲುತ್ತಿರಲಿಲ್ಲ. ಬಿಜೆಪಿ ಹೆದರಿದ್ದರೆ 17 ರಾಜ್ಯದಲ್ಲಿ ಗೆಲ್ಲಿರಲಿಲ್ಲ ಎಂದು ಈಶ್ವರಪ್ಪ ಹೇಳಿದರು.