ಹೊಸದಿಗಂತ ವರದಿ ಬಾಗಲಕೋಟೆ:
ಇಂದು ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ತಮಗೆ ಪ್ರಾಥಮಿಕ ಶಿಕ್ಷಣ ನೀಡಿದ ಶಿಕ್ಷಕರಿಗೆ ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಸನ್ಮಾನಿಸಿ ಗೌರವಿಸಿದರು.
ರಾಮಣ್ಣ ಕರಿಯಪ್ಪ ಬಾರಕೇರ ಅವರು ಉತ್ತೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಸಚಿವರಾದ ಆರ್.ಬಿ ತಿಮ್ಮಾಪುರ ಅವರಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡಿದ್ದರು.
ಇಂದು ಬಾಗಲಕೋಟೆಯ ನವ ನಗರದಲ್ಲಿರುವ ರಾಮಣ್ಣ ಕರಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವ ತಿಮ್ಮಾಪೂರ ಅವರು, ತಮಗೆ ಶಿಕ್ಷಣ ನೀಡಿದ ಗುರುಗಳ ಆಶೀರ್ವಾದ ಪಡೆದು ಯೋಗಕ್ಷೇಮ ವಿಚಾರಿಸಿದರು. ಅಂದು ನೀಡಿದ ಶಿಕ್ಷಣದಿಂದಾಗಿ ಇಂದು ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಲು ಸಾಧ್ಯವಾಯಿತು ಎಂದು ಸಚಿವ ಆರ್ ಬಿ ತಿಮ್ಮಾಪೂರ ಅವರು ಸ್ಮರಿಸಿದರು.