ಹೊಸದಿಗಂತ ವರದಿ, ಶಿವಮೊಗ್ಗ:
ಶರಾವತಿ ಹಿನ್ನೀರಿನ ಸೇತುವೆ ಉದ್ಘಾಟನಾ ಸಮಾರಂಭದ ಆಯೋಜನೆಯಲ್ಲಿ ಕೆಲ ಲೋಪದೋಷಗಳು ಆಗಿವೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ಹೋಗಲಾಗುವುದು ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಸೇತುವೆ ಉದ್ಘಾಟನೆ ಗೆ ಆಗಮಿಸಿ ಸಾಗರದ ಪ್ರವಾಸಿ ಮಂದಿರದಿಂದ ವಾಪಸು ಹೊರಟ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಇದನ್ನು ಪ್ರತಿಷ್ಠೆ ಆಗಿ ಯಾರೂ ತೆಗೆದುಕೊಳಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಾಮಗಾರಿ ನಡೆದಿವೆ. ಭೂಮಿ ನಾವು ಕೊಟ್ಟಿರುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಮಗಾರಿ ಉದ್ಘಾಟನೆ ಮಾಡುವುದು ಇದೆ. ಹಾಗಾಗಿ ಆಗಿರುವ ಲೋಪ ಸರಿಪಡಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ಅಪೇಕ್ಷೆ ಹೊಂದಿದ್ದರು. ಆದರೆ ಇದೇ ದಿನ ಇಂಡಿಯಲ್ಲಿ ಕಾರ್ಯಕ್ರಮ ಇದ್ದುದರಿಂದ ಮುಂದೂಡಲು ಕೋರಿದ್ದರು. ಬೇರೆ ಯಾವುದೇ ಉದ್ದೇಶ ಇಲ್ಲ. ಅವರಿಗೆ ತಡವಾಗಿ ಮಾಹಿತಿ ಹೋಗಿರುವುದೂ ಇದಕ್ಕೆ ಕಾರಣ ಆಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.