ಕುಕ್ಕರ್ ಬಾಂಬ್ ಸ್ಫೋಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ವಿ. ಸುನಿಲ್‌ಕುಮಾರ್

ಹೊಸದಿಗಂತ ವರದಿ, ಮಂಗಳೂರು:
ಸಮಾಜಘಾತುಕ ಶಕ್ತಿಗಳು ದುಷ್ಕೃತ್ಯ ಎಸಗುವ ಮೂಲಕ ಭಯದ ವಾತಾವರಣ ಸೃಷ್ಟಿಸಿ ದೇಶದಲ್ಲಿ ಅಸ್ಥಿರತೆ ಉಂಟುಮಾಡುವ ಷಡ್ಯಂತ್ರ ನಡೆಸುತ್ತಿರುವುದು ಮಂಗಳೂರಿನಲ್ಲಿ ನಡೆದ ಬಾಂಬು ಸ್ಫೋಟದ ಮೂಲಕ ಸ್ಪಷ್ಟವಾಗಿದೆ. ಇಂತಹ ಕೃತ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ಕುಮಾರ್ ಹೇಳಿದರು.
ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜತೆ ಶುಕ್ರವಾರ ಅವರು ಮಾತನಾಡಿದರು.
ಮಂಗಳೂರು ಬಾಂಬು ಸ್ಫೋಟ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ಮೂಲಕ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುವುದನ್ನು ಪತ್ತೆಹಚ್ಚಲಾಗುವುದು. ಈ ಕೃತ್ಯ ಯಾವುದೇ ವ್ಯಕ್ತಿ ಮಾಡಿದ್ದಾನೆ ಎನ್ನುವುದಕ್ಕಿಂತಲೂ ಈ ಮಾನಸಿಕತೆಯ ಚಿಂತನೆಯನ್ನು ದೂರಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಬೇಕು ಎಂದರು.
ದುಷ್ಕರ್ಮಿಗಳು ದೇವಸ್ಥಾನಗಳನ್ನು ಟಾರ್ಗೆಟ್ ಮಾಡುವ ಯತ್ನ ವಿಫಲವಾಗಿದೆ. ಈ ರೀತಿಯ ಕೃತ್ಯದ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರವಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇಂತಹ ಸಮಾಜಘಾತುಕ ಶಕ್ತಿಗಳನ್ನು ರಾಷ್ಟ್ರೀಯ ತನಿಖಾದಳ ಹಾಗೂ ನಮ್ಮ ಪೊಲೀಸರು ಮಟ್ಟಹಾಕುವ ವಿಶ್ವಾಸವಿದೆ ಎಂದರು.
ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಗಳೂರು ಎನ್‌ಐಎ ಘಟಕ ಸ್ಥಾಪನೆಗೆ ನಾವು ಮನವಿ ಮಾಡಿದ್ದು, ಕೇಂದ್ರ ಇದಕ್ಕೆ ಪೂರಕ ಸ್ಪಂದನೆ ನೀಡಿದೆ ಎಂದರು.
ಮಂಗಳೂರು ಮೇಯರ್ ಜಯಾನಂದ ಅಂಚನ್,
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಕಾರ್ಪೊರೇಟರ್‌ಗಳಾದ ಸಂದೀಪ್ ಗರೋಡಿ, ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪ್ರಭಾ ಮಾಲಿನಿ, ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ಗುರುಚರಣ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!