ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಪತ್ತೆಯಾಗಿದ್ದ 14 ವರ್ಷದ ಬಾಲಕಿಯ ಮೃತದೇಹ ಇಟ್ಟಿಗೆ ಗೂಡಿನಲ್ಲಿ ಸುಟ್ಟು ಕರಕಲಾದ ರೀತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ಭಿಲ್ವಾರಾ ಬಳಿ ನಡೆದಿದೆ.
ಭಿಲ್ವಾರದ ಇಟ್ಟಿಗೆ ಗೂಡುವೊಂದರಲ್ಲಿ ಅಪ್ರಾಪ್ತ ಬಾಲಕಿಯ ಸುಟ್ಟ ಅವಶೇಷಗಳು ಬುಧವಾರ ಪತ್ತೆಯಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಈ ವಿಷಯ ತಿಳಿದ ಕೂಡಲೇ ಪೊಲೀಸರು, ತನಿಖಾ ತಂಡಗಳು ಸ್ಥಳಕ್ಕೆ ಆಗಮಿಸಿ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.
ಮಂಗಳವಾರದಂದು ಬಾಲಕಿಯು ತನ್ನ ತಾಯಿಯೊಂದಿಗೆ ಮೇಕೆಗಳನ್ನು ಮೇಯಿಸಲು ಹೋಗಿದ್ದು, ಈ ವೇಳೆ ತಾಯಿಯಿಂದ ಬೇರ್ಪಟ್ಟಿದ್ದಾಳೆ. ಸಂಜೆಯಾದರೂ ಬಾಲಕಿಯು ಮನಗೆ ಹಿಂತಿರುಗದ ಕಾರಣ ಆಕೆಯ ಮನೆಯವರು ಮತ್ತು ಗ್ರಾಮಸ್ಥರು ಅವಳನ್ನು ಸಂಜೆಯವರೆಗೂ ಹುಡುಕಿದ್ದಾರೆ.
ಅದೇ ದಿನ ರಾತ್ರಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ರಾತ್ರಿ 10 ಗಂಟೆಯ ಸುಮಾರಿಗೆ ಗ್ರಾಮದ ಹೊರಗಿನ ಇಟ್ಟಿಗೆ ಗೂಡಿನಲ್ಲಿ ಕುಲುಮೆ ಉರಿಯುತ್ತಿದ್ದನ್ನು ನೋಡಿದ್ದಾರೆ. ಅನುಮಾನ ಬಂದು ಸ್ಥಳಕ್ಕೆ ಧಾವಿಸಿದ್ದಾರೆ, ಬಳಿಕ ಸ್ಥಳದಲ್ಲಿ ಕಾಣೆಯಾದ ಬಾಲಕಿಯ ಶೂ, ಬೆಳ್ಳಿ ಬಳೆ, ಮೂಳೆಯ ತುಂಡುಗಳೂ ಬೆಂಕಿಯಲ್ಲಿ ಪತ್ತೆಯಾಗಿವೆ.