ಹೊಸದಿಗಂತ ವರದಿ, ಮಡಿಕೇರಿ:
ಅಪ್ರಾಪ್ತ ವಯಸ್ಸಿನ ಮಗನಿಗೆ ಟ್ರ್ಯಾಕ್ಟರ್ ಚಲಾಯಿಸಲು ಅವಕಾಶ ನೀಡಿದ ತಾಯಿಯನ್ನು ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರನಗರದ ವಿನಾಯಕ ಬಡಾವಣೆ ನಿವಾಸಿ ಟಿ.ತುಳಸಿ ಎಂಬವರೇ ಬಂಧನಕ್ಕೊಳಗಾದವಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಶುಕ್ರವಾರ (ಮೇ 31) ಬೆಳಗ್ಗೆ 9ಗಂಟೆ ಸುಮಾರಿಗೆ ಕುಶಾಲನಗರ -ಸುಂದರನಗರ ರಸ್ತೆಯಲ್ಲಿ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ, ಚಿಕ್ಕತ್ತೂರಿನ ನಿವಾಸಿ ಮಹಾದೇವ ಎಂಬವರ ಪುತ್ರ ಶಿವಶಂಕರ್ (22) ಎಂಬ ಯುವಕ ಮೃತಪಟ್ಟಿದ್ದ.
ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು 279, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಪ್ರಾಪ್ತನಿಗೆ ಟ್ರ್ಯಾಕ್ಟರ್ ನೀಡಿದ ಆರೋಪದಡಿ ತುಳಸಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲದೆ ಟ್ರ್ಯಾಕ್ಟರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎರಡನೇ ಪ್ರಕರಣ: ಆರೋಪಿ ತುಳಸಿ ಅವರು ತಮ್ಮ ಅಪ್ರಾಪ್ತ ವಯಸ್ಸಿನ ಮಗನಿಗೆ ಟ್ರ್ಯಾಕ್ಟರ್ ಚಲಾಯಿಸಲು ಅವಕಾಶ ನೀಡುವ ಮೂಲಕ ಅಪಘಾತಕ್ಕೆ ಕಾರಣವಾಗಿರುವುದು ಇದು ಎರಡನೇ ಪ್ರಕರಣವಾಗಿದೆ.
ಈ ಪ್ರಕರಣದ ಅಪ್ರಾಪ್ತ ವಯಸ್ಸಿನ ಆರೋಪಿಯು ಕಳೆದ ಸಾಲಿನ ಮೇ 31ರಂದು ಸುಂದರನಗರ-ಹಾರಂಗಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿರುವ ಸಂದರ್ಭ ಪಾದಚಾರಿಗೆ ಅಪಘಾತಗೊಳಿಸಿದ್ದು, ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲೂ ಟ್ರ್ಯಾಕ್ಟರ್ ಮಾಲಕಿ ಹಾಗೂ ಅಪ್ರಾಪ್ತನ ತಾಯಿ ತುಳಸಿ ಅವರ ವಿರುದ್ಧ 279, 337, 338 ಐಪಿಸಿ & 4(1) ರೆ.ವಿ 181 ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದು, ಅವರಿಗೆ ಕುಶಾಲನಗರದ ಜೆಎಂಎಫ್ ಸಿ ನ್ಯಾಯಾಲಯವು ಕಳೆದ ಸಾಲಿನ ಸೆ.8ರಂದು 25 ಸಾವಿರ ರೂ.ದಂಡ ಹಾಗೂ ಒಂದು ದಿನದ ಜೈಲು ವಾಸದ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಅಪ್ರಾಪ್ತರಿಗೆ ವಾಹನ ನೀಡದಿರಿ: ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ವಾಹನ ಮಾಲಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮತ್ತು ವಾಹನ ಪರವಾನಗಿ ಹೊಂದಿಲ್ಲದವರಿಗೆ ವಾಹನ ಚಲಾಯಿಸಲು ಅಸ್ಪದ ನೀಡಬಾರದು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವುದು ಕಂಡುಬಂದಲ್ಲಿ ವಾಹನ ಮಾಲಕರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುವುದು ಅಥವಾ ಬೈಕ್ /ಕಾರುಗಳನ್ನು ಚಲಾಯಿಸುತ್ತಾ ಯಾವುದೇ ರೀತಿಯ ಸ್ಟಂಟ್‌ಗಳನ್ನು ಮಾಡಿರುವ ಭಾವಚಿತ್ರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಗ್ಗೆ ಮಾಹಿತಿ ನೀಡುವಂತೆ ಮತ್ತು ರಸ್ತೆಯಲ್ಲಿ ಯಾವುದೇ ಅಪಘಾತಗಳು ಸಂಭವಿಸಿದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮತ್ತು ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.