January22, 2026
Thursday, January 22, 2026
spot_img

ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ ಕೇಸ್: ಅಪರಾಧಿಯ ದಯಾ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ಮುರ್ಮು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ 2012ರಲ್ಲಿ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ರವಿ ಅಶೋಕ್ ಘುಮಾರೆ ಸಲ್ಲಿಸಿದ್ದ ದಯಾ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ರಾಷ್ಟ್ರಪತಿಗಳು ತಿರಸ್ಕರಿಸಿದ ಮೂರನೇ ದಯಾ ಅರ್ಜಿ ಇದಾಗಿದೆ.

ಮಾರ್ಚ್ 6, 2012 ರಂದು ಮಹಾರಾಷ್ಟ್ರದ ಜಲ್ನಾ ನಗರದ ಇಂದಿರಾನಗರ ಪ್ರದೇಶದಲ್ಲಿ ಈ ಹೇಯ ಕೃತ್ಯ ನಡೆದಿತ್ತು. ಅಪರಾಧಿ ಘುಮಾರೆ, ಕೇವಲ ಎರಡು ವರ್ಷದ ಬಾಲಕಿಗೆ ಚಾಕೊಲೇಟ್ ನೀಡುವ ಆಮಿಷ ಒಡ್ಡಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ.

2015ರ ಸೆಪ್ಟೆಂಬರ್ 16 ರಂದು ವಿಚಾರಣಾ ನ್ಯಾಯಾಲಯವು ಅಪರಾಧಿಗೆ ಮರಣದಂಡನೆ ವಿಧಿಸಿತು. ಜನವರಿ 2016 ರಲ್ಲಿ ಬಾಂಬೆ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿತ್ತು.

ಅಕ್ಟೋಬರ್ 3, 2019 ರಂದು ಸುಪ್ರೀಂ ಕೋರ್ಟ್, ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠದ ಬಹುಮತದ ತೀರ್ಪಿನಲ್ಲಿ ಮರಣದಂಡನೆಯನ್ನು ಎತ್ತಿಹಿಡಿದಿತ್ತು.

ಕೋರ್ಟ್ ತನ್ನ ತೀರ್ಪಿನಲ್ಲಿ, “ಅಪರಾಧಿಯು ತನ್ನ ‘ದೈಹಿಕ ಬಯಕೆಗಳ’ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲ. ಲೈಂಗಿಕ ಬಯಕೆ ತಣಿಸಲು ಆತ ಎಲ್ಲಾ ನೈಸರ್ಗಿಕ, ಸಾಮಾಜಿಕ ಮತ್ತು ಕಾನೂನು ಮಿತಿಗಳನ್ನು ಮೀರಿದ್ದಾನೆ. ಅಪರಾಧಿಯು ಎರಡು ವರ್ಷದ ಮಗುವಿನೊಂದಿಗೆ ಅಸ್ವಾಭಾವಿಕ ಅಪರಾಧ ಮಾಡಿ, ಅರಳದ ಜೀವವನ್ನು ನಿರ್ದಯವಾಗಿ ಕೊನೆಗೊಳಿಸಿದ್ದಾನೆ. ಈ ಕೃತ್ಯವು ವಿಕೃತ ಮನಸ್ಸಿನ ಕ್ರೌರ್ಯದ ಭಯಾನಕತೆಯನ್ನು ಬಿಚ್ಚಿಡುತ್ತದೆ” ಎಂದು ಅಭಿಪ್ರಾಯಪಟ್ಟಿತ್ತು.

ಅಪರಾಧಿಯು ಮಗುವನ್ನು ಅಪಹರಿಸಿ, ನಾಲ್ಕರಿಂದ ಐದು ಗಂಟೆಗಳ ಕಾಲ ನಿರಂತರವಾಗಿ ಹಿಂಸೆ ನೀಡಿದ್ದಾನೆ ಎಂಬ ಅಂಶವನ್ನು ಪೀಠವು ಗಮನಿಸಿತು. ಮಗುವಿಗೆ ರಕ್ಷಣೆ ನೀಡುವ ಬದಲು ಆಕೆಯನ್ನು ತನ್ನ ಕಾಮಕ್ಕೆ ಬಲಿಪಶುವನ್ನಾಗಿ ಮಾಡಿದ್ದಾನೆ ಎಂದು ನ್ಯಾಯಾಲಯದ ತೀರ್ಪು ಖಂಡಿಸಿತ್ತು. ಈಗ ರಾಷ್ಟ್ರಪತಿ ಮುರ್ಮು ಅವರ ನಿರ್ಧಾರದಿಂದ ಅಪರಾಧಿಯ ಗಲ್ಲು ಶಿಕ್ಷೆ ಖಚಿತವಾಗಿದೆ.

Must Read