Sunday, January 25, 2026
Sunday, January 25, 2026
spot_img

ಅಪ್ರಾಪ್ತ ವಯಸ್ಕೆ ಮೇಲಿನ ಅತ್ಯಾಚಾರ ಪ್ರಕರಣ: ನಾಲ್ವರು ದೋಷಿಗಳಿಗೆ ಜೈಲೇ ಗತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ನಾಲ್ವರು ನರಾಧಮರಿಗೆ ಬೆಳಗಾವಿಯ ಪೋಕ್ಸೋ ವಿಶೇಷ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಪ್ರಕರಣ ದಾಖಲಾದ ಕೇವಲ 8 ತಿಂಗಳ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಭಾರೀ ದಂಡ ವಿಧಿಸಿ ಆದೇಶಿಸಿದ್ದಾರೆ.

ಜೊತೆಗೆ, ಸಂತ್ರಸ್ತ ಬಾಲಕಿಗೆ ₹10 ಲಕ್ಷ ಪರಿಹಾರ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

2025ರ ಮೇ 10ರಂದು ಬೆಳಗಾವಿಯ ಸಾವಗಾಂವ್ ಬಳಿಯ ಫಾರ್ಮ್‌ಹೌಸ್‌ನಲ್ಲಿ ಈ ಭೀಕರ ಕೃತ್ಯ ನಡೆದಿತ್ತು. ಆರೋಪಿಗಳು ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ಬಿಯರ್ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ನಂತರ ಪ್ರಕರಣವನ್ನು ಮಾರ್ಕೆಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಎಲ್.ವಿ. ಪಾಟೀಲ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ತ್ವರಿತವಾಗಿ ನ್ಯಾಯದಾನ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Must Read