Thursday, December 18, 2025

Minorities Rights Day | ಇಂದು ಅಲ್ಪಸಂಖ್ಯಾತರ ಹಕ್ಕುಗಳ ದಿನ: ಸಮಾನತೆಗೆ ಧ್ವನಿ ನೀಡುವ ಸುದಿನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳ ಭರವಸೆ ನೀಡುತ್ತದೆ. ಆದರೆ ಸಮಾಜದಲ್ಲಿ ಸಂಖ್ಯಾಬಲ ಕಡಿಮೆ ಇರುವ ಸಮುದಾಯಗಳ ಹಕ್ಕುಗಳು, ಸಂಸ್ಕೃತಿ ಮತ್ತು ಗುರುತನ್ನು ರಕ್ಷಿಸಲು ವಿಶೇಷ ಜಾಗೃತಿ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಕೇವಲ ಒಂದು ಆಚರಣೆಯಲ್ಲ, ಅದು ಸಮಾನತೆ, ಗೌರವ ಮತ್ತು ಸಹಬಾಳ್ವೆಯ ಮಹತ್ವವನ್ನು ಮತ್ತೆ ಮತ್ತೆ ನೆನಪಿಸುವ ದಿನವಾಗಿದೆ.

ಅಲ್ಪಸಂಖ್ಯಾತರ ಹಕ್ಕುಗಳ ದಿನದ ಇತಿಹಾಸ

ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 18ರಂದು ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1992ರ ಡಿಸೆಂಬರ್ 18ರಂದು ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆ ‘ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ಘೋಷಣೆ’ಯನ್ನು ಅಂಗೀಕರಿಸಿತು. ಈ ಘೋಷಣೆಯು ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ, ಸಾಂಸ್ಕೃತಿಕ, ಭಾಷಾ ಮತ್ತು ಸಾಮಾಜಿಕ ಹಕ್ಕುಗಳನ್ನು ರಕ್ಷಿಸುವ ಹಾಗೂ ಜಾಗತಿಕ ಬದ್ಧತೆಯನ್ನು ಪ್ರತಿಪಾದಿಸಿತು. ಅದನ್ನೇ ಆಧಾರವಾಗಿ ಭಾರತವೂ ಈ ದಿನವನ್ನು ಆಚರಿಸುತ್ತಾ ಬಂದಿದೆ.

ಭಾರತದಲ್ಲಿ ಯಾರನ್ನು ಅಲ್ಪಸಂಖ್ಯಾತರು ಎಂದು ಯಾರನ್ನು ಕರೆಯಲಾಗುತ್ತದೆ?

ಭಾರತ ಸರ್ಕಾರದ ಅಧಿಸೂಚನೆಯ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಸಂಖ್ಯಾಬಲ ಕಡಿಮೆ ಹೊಂದಿರುವ ಧಾರ್ಮಿಕ ಸಮುದಾಯಗಳನ್ನು ಅಲ್ಪಸಂಖ್ಯಾತರೆಂದು ಗುರುತಿಸಲಾಗಿದೆ. ಇಸ್ಲಾಂ, ಕ್ರೈಸ್ತ, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯಗಳು ಭಾರತದಲ್ಲಿ ಅಧಿಕೃತ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿವೆ. ಭಾಷಾ ಅಲ್ಪಸಂಖ್ಯಾತರನ್ನೂ ಸಂವಿಧಾನಾತ್ಮಕವಾಗಿ ಗುರುತಿಸಲಾಗಿದೆ.

ಅಲ್ಪಸಂಖ್ಯಾತರ ಹಕ್ಕುಗಳ ದಿನದ ಮಹತ್ವ

ಈ ದಿನವು ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಗುರುತಿನ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಮಹತ್ವ ಹೊಂದಿದೆ. ಸಂವಿಧಾನದ ಕಲಂ 29 ಮತ್ತು 30ರ ಮೂಲಕ ನೀಡಿರುವ ಹಕ್ಕುಗಳನ್ನು ಜನರಿಗೆ ನೆನಪಿಸುವುದರ ಜೊತೆಗೆ, ಭೇದಭಾವವಿಲ್ಲದ ಸಮಾಜ ನಿರ್ಮಾಣದ ಅಗತ್ಯವನ್ನೂ ಈ ದಿನ ಒತ್ತಿ ಹೇಳುತ್ತದೆ. ಅಲ್ಪಸಂಖ್ಯಾತರ ಹಕ್ಕುಗಳ ದಿನವು ‘ಭಾರತ ವೈವಿಧ್ಯದಲ್ಲಿಯೇ ಏಕತೆ’ ಎಂಬ ಮೌಲ್ಯವನ್ನು ಬಲಪಡಿಸುವ ಸಂಕೇತವಾಗಿಯೂ ಪರಿಣಮಿಸಿದೆ.

error: Content is protected !!