ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ(ನಾಳೆ) ನಡೆಸಲಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರನ್ನು ಒಳಗೊಂಡ ಪೀಠ ಈ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ನಿಮಿಷಾ ಅವರನ್ನು ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಅಯೆಮೆನ್‌ಜೈಲು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಗಲ್ಲು ಶಿಕ್ಷೆ ದಿನಾಂಕ ನಿಗದಿಯಾಗಿದ್ದರಿಂದ ಆದಷ್ಟು ಬೇಗ ರಾಜತಾಂತ್ರಿಕ ಮಾರ್ಗಗಳನ್ನು ಅನ್ವೇಷಿಸುವ ಅಗತ್ಯವಿದೆ ಎಂದು ವಕೀಲ ಸುಭಾಷ್ ಚಂದ್ರನ್ ಕೆ.ಆರ್ ಅವರು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್‌ಮಲ್ಯ ಬಾಗ್ನಿ ಅವರಿದ್ದ ಪೀಠಕ್ಕೆ ತಿಳಿಸಿದ್ದರು.
ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಸಮ್ಮತಿಸಿದ್ದು, ಜುಲೈ 14ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿತ್ತು. ‘ಸೇವ್ ನಿಮಿಷ ಪ್ರಿಯಾ-ಇಂಟರ್‌ನ್ಯಾಷನಲ್ ಆ್ಯಕ್ಷನ್ ಕೌನ್ಸಿಲ್’ ಎಂಬ ಸಂಘಟನೆ ಈ ಅರ್ಜಿ ಸಲ್ಲಿಸಿದೆ.
ಏನಿದು ಪ್ರಕರಣ
ಯೆಮೆನ್ ಪ್ರಜೆಯೊಬ್ಬರನ್ನು (ತಲಾಲ್ ಅಬ್ಬೆ ಮೆಹಿ) ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ ನಿಮಿಷ ಪ್ರಿಯಾ ಅವರಿಗೆ ಅಲ್ಲಿನ ಸ್ಥಳೀಯ ನ್ಯಾಯಾಲಯವು ಮರಣ ದಂಡನೆ ವಿಧಿಸಿತು. ಅಲ್ಲಿನ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿಯಿತು. ಯೆಮನ್‌ನ ಅಧ್ಯಕ್ಷ ರಷದ್ ಅಲ್-ಅಲಿಮಿ ಕೂಡ ಮರಣ ದಂಡನೆಯನ್ನು ಅನುಮೋದಿಸಿದ್ದಾರೆ.