ರಾಜ್ಯ ಸರ್ಕಾರದ ಮತ್ತೊಂದು ನಿಗಮದಲ್ಲಿ ಅವ್ಯವಹಾರ: ಅಧಿಕಾರಿಗಳಿಗೆ ಗೇಟ್ ಪಾಸ್ ಕೊಟ್ಟ ಸಚಿವರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅವ್ಯಹಾರ ನಡೆದಿದ್ದು, ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ. ಇದರ ಬೆನ್ನಲ್ಲಿಯೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿಯೂ (ಕೆಎಸ್‌ಟಿಡಿಸಿ) ದೊಡ್ಡ ಮಟ್ಟದ ಹಗರಣ ನಡೆದಿದೆ.

ಈ ಕುರಿತು ಮಾಹಿತಿ ತಿಳಿದ ಕೂಡಲೇ ಎಚ್ಚೆತ್ತುಕೊಂಡ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವ್ಯವಹಾರ ಮಾಡಿದ ಅಧಿಕಾರಿಗಳನ್ನು ಕಿತ್ತೆಸೆದಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಯೂರ ಬಾಲ ಭವನದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಿಬ್ಬಂದಿ ಅವ್ಯವಹಾರ ಮಾಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಮಯೂರ ಬಾಲ ಭವನಕ್ಕೆ ಬರುವ ಪ್ರವಾಸಿಗರಿಗೆ ಹಣ ಪಾವತಿಗೆ ಬಾಲ ಭವನ ಸಂಸ್ಥೆಯ ಕ್ಯೂ ಆರ್ ಕೋಡ್ ಕೊಡದೇ ನಾಲ್ವರು ಸಿಬ್ಬಂದಿಯೂ ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಯ ಕ್ಯೂ ಆರ್ ಕೋಡ್ ಕೊಟ್ಟಿದ್ದಾರೆ. ಪ್ರವಾಸಿಗರು ಸರ್ಕಾರದ ಸೇವೆಯನ್ನು ಬಳಸಿ ಹಣ ಪಾವತಿಸಿದರೆ ನೇರವಾಗಿ ಭ್ರಷ್ಟ ಅಧಿಕಾರಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ. ಈ ಮೂಲಕ ಪ್ರವಾಸೋದ್ಯಮ ಇಲಾಖೆಯ ಸಂಸ್ಥೆಗೆ ಸೇರಬೇಕಿದ್ದ ಹಣವನ್ನು ಸಿಬ್ಬಂದಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ಹಣದ ಅವ್ಯವಹಾರ ಆಗಿರುವುದು ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪ್ರವಾಸೋದ್ಯಮ ಸಚಿವ ಎಚ್.ಕೆ‌ ಪಾಟೀಲ್ ಅಧಿಕಾರಿಗಳನ್ನು ಅಮಾನತು ಮಾಡಿದರೆ, ಗುತ್ತಿಗೆ ಸಿಬ್ಬಂದಿಯನ್ನು ಸೇವೆಯಿಂದ ಕಿತ್ತೆಸೆದಿದ್ದಾರೆ.

ಇನ್ನು ಈ ಬಗ್ಗೆ ಹಣ ದುರುಪಯೋಗ‌ ದೃಢಪಟ್ಟಿದ್ದಲ್ಲದೇ, ಸಿಬ್ಬಂದಿ ಕೂಡ ತಪ್ಪೊಪ್ಪಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ಸರ್ಕಾರಿ ನೌಕರರಾಗಿದ್ದರೆ, ಉಳಿದ ಇಬ್ಬರು ಗುತ್ತಿಗೆ ಆಧಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ಮಯೂರ ಬಾಲಭವನದಲ್ಲಿ ಕೆಲಸ ಮಾಡಲು ಗುತ್ತಿಗೆ ಆಧಾರದಲ್ಲಿ ಒಂದು ವರ್ಷಕ್ಕೆ ಸೇವೆಗೆ ಬಂದಿದ್ದ ಸಿಬ್ಬಂದಿ ಆಗಿದ್ದಾರೆ. ಅವ್ಯವಹಾರ ನಡೆಸಿದ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸಚಿವ ಹೆಚ್.ಕೆ. ಪಾಟೀಲ್ ಸೂಚನೆ ನೀಡಿದ್ದಾರೆ.

ವೈಯಕ್ತಿಕ ಬ್ಯಾಂಕ್ ಖಾತೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮೂಲಕ ಅವ್ಯವಹಾರ:
ಕೆ.ರಾಮಚಂದ್ರ – ದ್ವಿತೀಯ ದರ್ಜೆ ಸಹಾಯಕ = 31,917 ರೂ. ಅವ್ಯವಹಾರ (ಸೇವೆಯಿಂದ ವಜಾ)
ವೆಂಕಟೇಶ್- ಸಹಾಯಕ ಉಗ್ರಾಣಿಕ = 48,658 ರೂ. ಅವ್ಯವಹಾರ (ಅಮಾನತು)
ಅಬ್ದುಲ್ ವಾಜಿದ್ – ವಾಹನ ಚಾಲಕ = 2,66,000 ರೂ. ಅವ್ಯವಹಾರ (ಅಮಾನತು)
ಕೋದಂಡರಾಮ – ಸಹಾಯಕ ಪರಿಚಾರಿಕ = 3,920 ರೂ. ಅವ್ಯವಹಾರ (ಸೇವೆಯಿಂದ ವಜಾ)

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!